ಮದ್ದೂರು ಉತ್ಸವ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಕೆ.ಎಂ.ಉದಯ್, ದಿನೇಶ್‌ಗೂಳಿಗೌಡ, ವಿನುತಾ, ಇಕ್ಬಾಲ್ ಹುಸೇನ್, ಚಲುವರಾಜು, ಕೆ.ಎಂ.ರವಿ, ಶ್ರೀನಿವಾಸ್ ಇದ್ದರು. 
ರಾಜ್ಯ

ದಸರಾ ಮಾದರಿಯಲ್ಲಿ ಮದ್ದೂರು ಉತ್ಸವ

ಮದ್ದೂರು: ಶಾಸಕ ಕೆ.ಎಂ.ಉದಯ್ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುವ ಜತೆಗೆ ಮೊದಲ ಬಾರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಮದ್ದೂರು ಉತ್ಸವ ಹಮ್ಮಿಕೊಂಡು ಇತಿಹಾಸ ಸೃಷ್ಟಿಸಿರುವುದು ಮೆಚ್ಚುಗೆಯ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗ್ರಾಮದೇವತೆ ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ ಹಾಗೂ ಶ್ರೀ ಉಗ್ರ ನರಸಿಂಹಸ್ವಾಮಿ ಬ್ರಹ್ಮೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಮದ್ದೂರು ಉತ್ಸವ-2026 ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರ ನೋಡಿದರೆ ಮೈಸೂರು ದಸರಾವನ್ನು ಜ್ಞಾಪಿಸುತ್ತದೆ. ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಸುಗಳಿಗೆ ಬಹುಮಾನ ವಿತರಣೆ, ವಿವಿಧ ಸ್ಪರ್ಧೆಗಳನ್ನು ಆಯೋಜನೆ ಜತೆಗೆ ಬೃಹತ್ ಮಟ್ಟದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಮನರಂಜನೆ ನೀಡುವ ಮೂಲಕ ಕೆ.ಎಂ.ಉದಯ್ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಈ ಕ್ಷೇತ್ರದಲ್ಲಿ ಹಲವಾರು ಜನನಾಯಕರು ತಮ್ಮದೇ ಆದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಶಾಸಕ ಉದಯ್ ಆಯ್ಕೆಯಾದ ಮೂರೇ ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ 2 ಸಾವಿರ ಕೋಟಿ ರೂ. ಅನುದಾನ ತಂದು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಹಿಂದೆ ಮದ್ದೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮದ್ದೂರು ಕ್ಷೇತ್ರಕ್ಕೆ ಮೆಟ್ರೋ, ವಿಮಾನ ನಿಲ್ದಾಣದಂತಹ ಯೋಜನೆಗಳು ಬೇಡ, ನೀರಾವರಿಗೆ ಹೆಚ್ಚಿನ ಅನುದಾನ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ, ರೈತರ ಬದುಕನ್ನು ಹಸನಾಗಿಸುವ ಉದ್ದೇಶದಿಂದ ಜಿಲ್ಲೆಗೆ 2500 ಕೋಟಿ ರೂ. ಅನುದಾನ ನೀಡಿದ್ದು, ಅದರಲ್ಲಿ 800 ಕೋಟಿ ರೂ.ಗಳನ್ನು ಶಾಸಕರ ಒತ್ತಾಯ ಮೇರೆಗೆ ನೀರಾವರಿ ಕ್ಷೇತ್ರ ಒಂದಕ್ಕೆ ಬಿಡುಗಡೆ ಮಾಡುವ ಮೂಲಕ ಸೂಳೆಕೆರೆ ನೀರು, ಮದ್ದೂರು ಕೆರೆಗಳ ಒತ್ತುವರಿ ತೆರವು ಮಾಡಿ, ನಾಲೆಗಳ ಆಧುನೀಕರಣ ಮಾಡುವ ಮೂಲಕ ರೈತರ ಶಾಶ್ವತವಾದ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದಾರೆ ಎಂದು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಶಾಸಕ ಉದಯ್ ಅವರು ಅಭಿವೃದ್ಧಿ ಜತೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಇತ್ತೀಚೆಗೆ ರಾಸುಗಳ ಜಾತ್ರೆ ಸಾಕಷ್ಟು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಮದ್ದೂರಿನಲ್ಲಿ ಬೃಹತ್ ರಾಸುಗಳ ಜಾತ್ರೆಯನ್ನು ಆಯೋಜಿಸಿ ದೊಡ್ಡ ಪ್ರಮಾಣದ ಜಾತ್ರೆಯನ್ನಾಗಿ ಪರಿವರ್ತಿಸಿ ಲಕ್ಷಾಂತರ ರೂ. ಬಹುಮಾನ ನೀಡುವ ಮೂಲಕ ರೈತರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಈ ಹಿಂದೆ ಆಡಳಿತ ನಡೆಸಿದ್ದ ಯಾವ ಶಾಸಕರೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಹೊಸ ಹೊಸ ಚಿಂತನೆಗಳ ಮೂಲಕ ಕ್ಷೇತ್ರಕ್ಕೆ ಹೊಸ ರೂಪವನ್ನು ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.
ಚಿತ್ರನಟ ವಿ.ರವಿಚಂದ್ರನ್ ಮಾತನಾಡಿ, ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವವನ್ನು ಅದ್ದೂರಿಯಾಗಿ ಅಚರಣೆ ಮಾಡುತ್ತಿರುವುದು ಮೆಚ್ಚುಗೆಯ ವಿಷಯವಾಗಿದ್ದು, ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ವಿನುತಾ ಉದಯ್, ಟ್ರಸ್ಟಿ ಕೆ.ಎಂ.ರವಿ, ಶಾಸಕರಾದ ರವಿಕುಮಾರ್ ಗಣಿಗ, ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ರವಿ, ಚಿತ್ರ ನಿರ್ದೇಶಕ ಜೋಗಿ ಪ್ರೇಮ್, ಚಿತ್ರನಟಿ ರಕ್ಷಿತಾಪ್ರೇಮ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಸಿ.ಹರೀಶ್, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಉದ್ಯಮಿ ಹಳ್ಳಿಕೆರೆ ಎಚ್.ಎಲ್.ಸತೀಶ್ ಇತರರಿದ್ದರು.