- ಟ್ರೀಟ್‌ಮೆಂಟ್‌ಗಾಗಿ ಚಂಡಿಗಡದ ಚರ್ಚ್‌ಗೆ ಹೋದ
- ಥೈಲ್ಯಾಂಡ್ ಮೊಬೈಲ್ ನಂಬರ್‌ನಿಂದ ಮೋಸಕ್ಕೊಳಗಾದ
- ಮ್ಯಾನ್ಮಾರ್‌ನಲ್ಲಿ ಡಾಟಾ ಎಂಟ್ರಿ ಹುದ್ದೆಗೆ ಮಾರುಹೋದ
- ಬ್ಯಾಂಕಾಕ್‌ನ ದಟ್ಟಾರಣ್ಯದಲ್ಲಿ ಬಂಧಿಯಾದ
- ಇಂಡಿಯನ್ ಏರ್‌ಫೋರ್ಸ್‌ನಿಂದ ಬದುಕಿಬಂದ
‘ಡಾಟಾ ಎಂಟ್ರಿ ಆಪರೇಟರ್’ ಕೆಲಸದ ಆಸೆ ತೋರಿಸಿ, ಬ್ಯಾಂಕಾಕ್‌ಗೆ ಕರೆಯಿಸಿಕೊಂಡು, ಅಲ್ಲಿಂದ ಮ್ಯಾನ್ಮಾರ್‌ಗೆ ಕರೆದೊಯ್ದು, ಅಕ್ರಮವಾಗಿ ಬಂಧನದಲ್ಲಿರಿಸಿ, ಸೈಬರ್ ವಂಚನೆ ಮಾಡುವ ಗುಲಾಮನನ್ನಾಗಿಸಿಕೊಂಡ ದುಷ್ಟಕೂಟದಿಂದ ಅಮಾಯಕನೋರ್ವ ಬಚಾವಾಗಿ ಬಂದ ಘಟನೆಯೇ ಅತಿರಂಜಿತ ಮತ್ತು ಬಲು ರೋಮಾಂಚಕ !
ಕೇಳಲು ಪತ್ತೆದಾರಿ ಕಾದಂಬರಿಯಾಧಾರಿತ ಸಿನೆಮಾ ಕಥೆಯಂತಿದ್ದರೂ ಇಂಥದ್ದೊಂದು ಘಟನೆ ಬಸವನಬಾಗೇವಾಡಿಯ ಉಕ್ಕಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತನ್ನ ಪಾಡಿಗೆ ತಾನು ವ್ಯವಸಾಯ ಮಾಡಿಕೊಂಡಿದ್ದ 25ರ ಹರೆಯದ ಅಸ್ಪಾಕ್ ಲಾಲಸಾಬ್ ಇನಾಮದಾರ ಇಂಥದ್ದೊಂದು ಕರಾಳ ಕೂಪಕ್ಕೆ ಸಿಲುಕಿ ಅಚ್ಚರಿಯ ರೀತಿಯಲ್ಲಿ ಬಚಾವಾಗಿ ಬಂದ ಅದೃಷ್ಟಶಾಲಿ. ಅಂದ ಹಾಗೆ ಘಟನೆ ನಡೆದಿದ್ದು 2025ರ ಅಕ್ಟೋಬರ್ 1ರಿಂದ 2026ರ ಜನವರಿ 7ರ ನಡುವಿನ ಅವಧಿಯಲ್ಲಾದರೂ ಅಳೆದು ತೂಗಿ ಪ್ರಕರಣ ದಾಖಲಿಸಿದ್ದು ಮಾತ್ರ ಜ.20ರಂದು ಸೈಬರ್ ಠಾಣೆಯಲ್ಲಿ.
ಘಟನೆ ನಡೆದಿದ್ದು ಹೀಗೆ
ತಂದೆ ಲಾಲಸಾಬ್, ತಾಯಿ ಸೈನಾಜ್ ಹಾಗೂ ತಂಗಿ ಅಲ್ಮಾಸ್ ಜೊತೆ ಅಸ್ಪಾಕ್ ಆರಾಮಾಗಿಯೇ ಇದ್ದ. ಈತನ ಮಾವ ಸದ್ದಾಮ್‌ಹುಸೇನ್ ವಾಲೀಕಾರ ಧ್ವಜದ ಕಂಬದ ಮೇಲಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ. ಆಸ್ಪತ್ರೆಗೆ ತೋರಿಸಿದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಒಂದಿನ ಯುಟ್ಯೂಬ್ ನೋಡುತ್ತಿದ್ದಾಗ ಚಂಡಿಗಡದ ಪ್ರಾಪೆಟ್ ಬ್ರಿಜೆಂದ್ರಸಿಂಗ್ ಚರ್ಚ್‌ನಲ್ಲಿ ಚಿಕಿತ್ಸೆ ಲಭ್ಯವಿರುವ ಮಾಹಿತಿ ಅರಿತು 2024ರ ಮಾರ್ಚ್‌ನಲ್ಲಿ ಚಂಡಿಗಡಗೆ ಪ್ರಯಾಣ ಬೆಳೆಸಿದ. ಅಲ್ಲಿ ಉತ್ತರ ಪ್ರದೇಶ ಮೂಲದ ಅಂಕುಶಕುಮಾರ ಎಂಬಾತನೊಬ್ಬ ಸಿಕ್ಕಿದ್ದು, ಆತನಿಗೆ ಚರ್ಚ್ ವಿಳಾಸ ಕೇಳಲಾಗಿ ಆತ ವಿಳಾಸ ನೀಡುವ ನೆಪದಲ್ಲಿ ಅಸ್ಪಾಕ್‌ನಿಂದ ಮೊಬೈಲ್ ನಂಬರ್ ಪಡೆದನು. ಮುಂದೆ 2025ರ ಜುಲೈನ್‌ಲ್ಲಿ ಥೈಲ್ಯಾಂಡ್ ದೇಶದ ನಂಬರ್‌ನಿಂದ ಅಸ್ಪಾಕ್‌ಗೆ ಕರೆ ಮಾಡುವ ಅಂಕುಶಕುಮಾರ ಮ್ಯಾನ್ಮಾರ್‌ದಲ್ಲಿ ಡಾಟಾ ಎಂಟ್ರಿ ಮಾಡುವ ಕೆಲಸವಿದ್ದು ತಿಂಗಳಿಗೆ 60-70 ಸಾವಿರ ವೇತನ ಸಿಗಲಿದೆ. ಊಟ ಮತ್ತು ವಸತಿ ಉಚಿತ ಎಂದು ತಿಳಿಸಿದ. ವರ್ಷದ ಒಪ್ಪಂದದ ಮೇರೆಗೆ ಅಸ್ಪಾಕ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ ಮ್ಯಾನ್ಮಾರ್‌ಗೆ ಸಜ್ಜಾಗುವನು.
ಬ್ಯಾಂಕಾಕ್ ಮೂಲಕ ಪ್ರಯಾಣ
ಮೊಬೈಲ್‌ನಲ್ಲಿಯೇ ಒನ್‌ಸೈಡ್ ವಿಡಿಯೋ ಕರೆ ಮಾಡಿ ಸಂದರ್ಶನ ನಡೆಸುವ ಅಂಕುಶಕುಮಾರ ಎರಡ್ಮೂರು ದಿನ ಬಿಟ್ಟು ಟೆಲಿಗ್ರಾಮ್ ಮೂಲಕ ವೀಸಾ ಮತ್ತು ವಿಮಾನ್ ಟಿಕೆಟ್ ಕಳುಹಿಸುವನು. 2025 ಸೆ.30ರಂದು ಅಸ್ಪಾಕ್ ಕಾರ್ ಮೂಲಕ ಹೈದ್ರಾಬಾದ್‌ಗೆ ತೆರಳಿ ಅಲ್ಲಿಂದ ವಿಮಾನ ಮೂಲಕ ಬ್ಯಾಂಕಾಕ್ ತಲುಪುತ್ತಾನೆ. ಅಲ್ಲಿಂದ ಅಪರಚಿತನೋರ್ವ ಕಾರ್‌ನಲ್ಲಿ ಕರೆದೊಯ್ದು ಹೈವೇ ಪಕ್ಕದ ಹೊಟೇಲ್‌ನಲ್ಲಿ ಇಳಿಸಿ ನಿರ್ಗಮಿಸುತ್ತಾನೆ. ಮರುದಿನ ಅಲ್ಲಿಗೆ ಬರುವ ಮತ್ತೊಂದು ಕಾರು ಅಸ್ಪಾಕ್‌ನನ್ನು ಅರಣ್ಯ ಪ್ರದೇಶದಲ್ಲಿ ಕರೆದೊಯ್ಯುತ್ತದೆ. ಎರಡ್ಮೂರು ಕಾರ್‌ಗಳು ಬದಲಾಗುತ್ತವೆ. ಕೊನೆಗೆ ರಾತ್ರಿಯಿಡೀ ಅರಣ್ಯದಲ್ಲೇ ಇರಿಸುತ್ತಾರೆ. ಅಲ್ಲಿಗೆ ಕಿನ್ಯಾ, ಆಫ್ರಿಕಾ, ಇಂಡಿಯಾದ ಸುಮಾರು 10 ಜನ ಜೊತೆಗೂಡುತ್ತಾರೆ. ನಸುಕಿನ ಜಾವ ಅಲ್ಲಿಂದ ಕರೆದೊಯ್ದು ಮತ್ತೊಂದು ಹಳ್ಳಿಯಲ್ಲಿರಿಸುತ್ತಾರೆ. ಅಲ್ಲಿ ಅಸ್ಪಾಕ್‌ನಂತೆಯೇ ಬೇರೆ ಬೇರೆ ದೇಶಗಳ ಒಟ್ಟು 100 ಜನರಿದ್ದರು.
ಅಲ್ಲಿಂದ ಥೈಲ್ಯಾಂಡ್ ಬಾರ್ಡರ್‌ಗೆ ಕರೆದೊಯ್ದು ಹಡುಗಿನ ಮೂಲಕ ಬಾರ್ಡರ್ ಕ್ರಾಸ್ ಮಾಡಿ ಮ್ಯಾನ್ಮಾರ್ ದೇಶದ ಬಾರ್ಡರ್‌ನ ಮನೆಯೊಂದರಲ್ಲಿ ಕೂಡಿ ಹಾಕುವರು. ಅಲ್ಲಿಗೆ ಬರುವ ಮ್ಯಾನ್ಮಾರ್ ಸೈನಿಕರು ಕೆಕೆ ಪಾರ್ಕ್ ಎಂಬ ಕಂಪನಿಯಲ್ಲಿ ಕೂಡಿ ಹಾಕುವರು. ಅಲ್ಲಿ ಅಸ್ಪಾಕ್‌ಗೆ ಅಂಕುಶಕುಮಾರ ಕಾಣಿಸಿಕೊಳ್ಳುವನು.
ಸೈಬರ್ ವಂಚನೆಯ ತರಬೇತಿ
ಮೂರು ದಿನದ ವಿಶ್ರಾಂತಿ ಬಳಿಕ ಕೆಲಸಕ್ಕೆ ಹಾಜರಾಗುವ ಅಸ್ಪಾಕ್‌ಗೆ ಯುಎಸ್‌ಎ ಜನರಿಗೆ ಸೈಬರ್ ವಂಚನೆ ಮಾಡುವಂತೆ ಪ್ರೇರೇಪಿಸುತ್ತಾರೆ. ಅದಾಗಲೇ ಕೆಲವರು ಆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು ಕಾಣಿಸುತ್ತದೆ. ಅಸ್ಪಾಕ್‌ನ ಮೇಲೆ ಇದ್ದ ಚೀನಾ ದೇಶದವರಲ್ಲಿ ಕೆಲವರು ಪರಾರಿಯಾಗಿತ್ತಾರೆ. ಊಟ-ನೀರಿಲ್ಲದೇ ಎರಡು ದಿನ ಕಳೆದ ಬಳಿಕ ಭಾರತದ ಕೆಲವರು ಸಿಗುತ್ತಾರೆ. ಅದರಲ್ಲಿ ಒಬ್ಬನ ಮೊಬೈಲ್ ಸಹಾಯದಿಂದ ಭಾರತದ ಎಂಬೆಸ್ಸಿಗೆ ಈ-ಮೇಲ್ ಸಂದೇಶ ಕಳುಹಿಸುತ್ತಾರೆ. ನಡೆದ ವೃತ್ತಾಂತವನ್ನೆಲ್ಲ ಎಳೆಎಳೆಯಾಗಿ ಬಿಡಿಸಿಟ್ಟು ಸಹಾಯಕ್ಕಾಗಿ ಅಂಗಲಾಚುತ್ತಾರೆ. ಅಷ್ಟೊತ್ತಿಗಾಗಲೇ ಇವರನ್ನು ಚೀನಾ ದೇಶದ ಕಂಪನಿಯೊಂದಕ್ಕೆ ಮಾರಾಟ ಮಾಡಲಾಗುತ್ತದೆ. ಅದಕ್ಕೆ ಒಪ್ಪದಿದ್ದಾಗ ಬೇರೊಂದು ಕಂಪನಿಗೆ ಮಾರಾಟ ಮಾಡುತ್ತಾರೆ. ಅಲ್ಲೂ ಕೆಲಸ ಮಾಡಲು ಒಪ್ಪದೇ ಇದ್ದಾಗ ಸೈನಿಕರು ಬಂದು ಒಂದೇ ದೇಶದವರನ್ನು ಬೇರೆ ಬೇರೆ ಮಾಡುತ್ತಾರೆ. ಹೀಗೆ ಸುಮಾರು 40-45 ದಿನ ಕಳೆಯುತ್ತದೆ.
ಭಾರತೀಯ ಅಧಿಕಾರಿಗಳ ಆಗಮನ
2026 ಜ. 6ರಂದು ಭಾರತದ ಅಧಿಕಾರಿಗಳು ಬಂದು ಮ್ಯಾನ್ಮಾರ್ ಸೈನಿಕ ಕ್ಯಾಂಪ್‌ನಿಂದ ಮೇವಾಡಿ ವಿಮಾನ ನಿಲ್ದಾಣಕ್ಕೆ ತರುತ್ತಾರೆ. ಅಲ್ಲಿಗೆ ಬರುವ ಇಂಡಿಯನ್ ಏರ್‌ಫೋರ್ಸ್‌ನವರು ವಿಮಾನದಲ್ಲಿ ದೆಹಲಿಗೆ ತರುತ್ತಾರೆ. ವಿಮಾನದಲ್ಲಿ 278 ಭಾರತೀಯ ನಾಗರಿಕರಿದ್ದರು. ಅಲ್ಲಿಂದ ನೇರ ತವರಿಗೆ ಬರುವ ಅಸ್ಪಾಕ್ ನಡೆದ ವೃತ್ತಾಂತವನ್ನೆಲ್ಲ ಕುಟುಂಬಸ್ಥರಿಗೆ ವಿವರಿಸುತ್ತಾನೆ. ಬಳಿಕ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುತ್ತಾನೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆಯೇನೋ ಚುರುಕುಗೊಳಿಸಿದ್ದಾರೆ ಆದರೆ, ಕರಾಳ ಕೂಪದಿಂದ ಅಚ್ಚರಿಯ ರೀತಿಯಲ್ಲಿ ಹೊರ ಬಂದ ಅಸ್ಪಾಕ್‌ನ ಸ್ಥಿತಿ ಯಾರಿಗೂ ಬರಬರಾದರೆಂಬುದೇ ಪ್ರಜ್ಞಾವಂತರ ಆಶಯ.
ಇದೊಂದು ಹೊಸ ಮಾದರಿಯ ಸೈಬರ್ ವಂಚನೆ ಪ್ರಕರಣ. ವಿದೇಶಿ ನೌಕರಿ ಎಂದು ಯಾಮಾರುವವರ ಸಂಖ್ಯೆ ಹೆಚ್ಚು. ಆನ್‌ಲೈನ್ ಮೂಲಕ ಸಂದರ್ಶನ ನಡೆಸಿ ಯಾಮಾರಿಸಿ ಕರೆದೊಯ್ದು ದುಷ್ಕೃತ್ಯಕ್ಕೆ ಪ್ರೇರೇಪಿಸುತ್ತಾರೆ. ಸಾರ್ವಜನಿಕರು ಇಂಥ ವಂಚನೆಯಿಂದ ಜಾಗೃತರಾಗಬೇಕು. ಸದ್ಯ ಅಸ್ಪಾಕ್ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ಜೊತೆಗೆ ಸರ್ವಾಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.