ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ‘ಮದ್ಯ ಮಾರಾಟ’ ಮತ್ತು ‘ಕೇಸ್‌ಗಳ’ ಟಾರ್ಗೆಟ್ ನಿಗದಿಯಿಂದ ಕೆಳಹಂತದ ಅಧಿಕಾರಿಗಳು ರೋಸಿ ಹೋಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ಅಧಿಕ ರಾಜಸ್ವ ತರುವ ಇಲಾಖೆಗಳ ಪೈಕಿ ಅಬಕಾರಿ ಮುಂಚೂಣಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರವು, ಇಲಾಖೆಗೆ ಬರೋಬ್ಬರಿ 45 ಸಾವಿರ ಕೋಟಿ ರೂ.ಆದಾಯ ಸಂಗ್ರಹದ ಗುರಿ ಕೊಟ್ಟಿದೆ. ರಾಜ್ಯದಲ್ಲಿ 4,002 ವೈನ್‌ಶಾಪ್(ಸಿಎಲ್2),2,994 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 3,644 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,071 ಎಂಎಸ್‌ಐಎಲ್ (ಸಿಎಲ್11ಸಿ) ಸೇರಿ 13,519 ಮದ್ಯದಂಗಡಿಗಳಿವೆ.
ಪ್ರತಿ ನಿತ್ಯ ಮದ್ಯ ಮಾರಾಟದಿಂದ 100-120 ಕೋಟಿ ರೂ.ನಂತೆ ತಿಂಗಳಿಗೆ 3,700-3,800 ಕೋಟಿ ರೂ.ಆದಾಯ ಗಳಿಸಿದರೆ ಮಾತ್ರ ಇಲಾಖೆಗೆ ಕೊಟ್ಟಿರುವ ಆದಾಯ ಸಂಗ್ರಹ ಗುರಿ ಮುಟ್ಟಲು ಸಾಧ್ಯವಾಗಲಿದೆ. ಹಾಗಾಗಿ, ಪ್ರತಿ ತಿಂಗಳು ಇಂತಿಷ್ಟು ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್ ) ಹಾಗೂ ಬಿಯರ್ ಮಾರಾಟವಾಗುವಂತೆ ಅಬಕಾರಿ ಆಯುಕ್ತರು, ಅಧೀಕ್ಷಕ, ಉಪ ಆಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಮತ್ತು ಪೇದೆಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಪ್ರತಿ ಬಾರ್‌ಗಳಿಗೆ ನಿಗದಿಪಡಿಸುವ ಐಎಂಎಲ್ ಮತ್ತು ಬಿಯರ್ ಬಾಕ್ಸ್ ‘ಇಂಡೆಂಟ್’ ಕಡಿಮೆಯಾದರೆ ಮೇಲಾಧಿಕಾರಿಗಳು, ಕೆಳಹಂತದ ಅಧಿಕಾರಿಗಳಿಗೆ ಬೈಗುಳ ಶಿಕ್ಷೆ ನೀಡುತ್ತಾರೆ.
ಪ್ರತಿ ಬಾರ್ ಅಂಗಡಿಗೆ ತಿಂಗಳಿಗೆ ಇಂತಿಷ್ಟು ಬಾಕ್ಸ್ ಐಎಂಎಲ್ ಪೂರೈಕೆಯಾಗಬೇಕು ಎಂದು ಕೇಳಹಂತದ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ. ಯಾವುದೇ ಕಾರಣಕ್ಕೂ ಆ ಅಂಗಡಿಗೆ ನಿಗದಿಪಡಿಸಿರುವ ಬಾಕ್ಸ್‌ಗಳಕ್ಕಿಂತ ಕಡಿಮೆ ಪೂರೈಕೆಯಾಗುವಂತಿಲ್ಲ. ಒಂದು ವೇಳೆ ಮದ್ಯದ ಇಂಡೆಂಟ್ ಅಥವಾ ಪೂರೈಕೆಯಲ್ಲಿ ಕುಸಿತವಾದರೆ ಪ್ರತಿ ಬಾರಿ ನಡೆಯುವ ಮೀಟಿಂಗ್‌ನಲ್ಲಿ ಮೇಲಧಿಕಾರಿಗಳಿಂದ ಬೈಗುಳ ಶಿಕ್ಷೆ ಇರುತ್ತದೆ. ಅನಧಿಕೃತ ಮದ್ಯ ಮಾರಾಟ ಹೆಸರಿನಲ್ಲಿ ಮದ್ಯದಂಗಡಿಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಅಬಕಾರಿ ಆಯುಕ್ತರು ಕಿರುಕುಳ ಕೊಡುತ್ತಿದ್ದಾರೆ.ಅತಿ ಹೆಚ್ಚು ಮದ್ಯ ಮಾರಾಟ ಮತ್ತು ಕೇಸ್ ದಾಖಲಿಸಿದರೆ ನಮಗೆ ಭೇಷ್ ಎನ್ನುತ್ತಾರೆ. ಕಡಿಮೆ ಕೇಸ್, ಮಾರಾಟದಲ್ಲಿ ಇಳಿಕೆಯಾದರೆ ನಿಂದಿಸಿ ಎಚ್ಚರಿಕೆ ಕೊಡುತ್ತಾರೆ ಎಂದು ಹೆಸರಲೆಚ್ಚಿಸದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಅನಧಿಕೃತ ಮದ್ಯ ಮಾರಾಟಕ್ಕೂ ಟಾರ್ಗೆಟ್
ಸರ್ಕಾರದ ನಿಯಮದಂತೆ ಖಾಸಗಿ ವ್ಯಕ್ತಿಗಳು ಮದ್ಯ ಮಾರಾಟ ಮಾಡುವಂತಿಲ್ಲ. ಇಲಾಖೆಯಿಂದ ಅಬಕಾರಿ ಪರವಾನಗಿ ಪಡೆದಿರುವವರು ಮಾತ್ರ ಮಾರಾಟಕ್ಕೆ ಅವಕಾಶ ಇರುತ್ತದೆ. ಆದರೆ, ರಾಜ್ಯದ ಬಹುತೇಕ ಗ್ರಾಮ, ಮಿಲಿಟರಿ ಹೋಟೆಲ್ ಮತ್ತು ಕಿರಾಣಿ ಅಂಗಡಿಗಳಿಗೆ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ. ಇಲ್ಲಿಯೂ ಅಧಿಕವಾಗಿ ಮದ್ಯ ಮಾರಾಟ ಮಾಡುವಂತೆ ಕಿರಾಣಿ ಅಂಗಡಿಗಳಿಗೆ ಇಲಾಖೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ. ಬೆಳಗ್ಗೆ ವೇಳೆ ಜಾಸ್ತಿ ಮದ್ಯ ಕಳುಹಿಸುವಂತೆ ಬಹುತೇಕ ಕಿರಾಣಿ ಅಂಗಡಿಯವರು ಬಾರ್ ಅಂಗಡಿಗಳಿಗೆ ಬೇಡಿಕೆ ಇಟ್ಟಿದ್ದಾರೆ.