- ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಬಸ್-ಲಾರಿ ಅಪಘಾತ
- ಚಿತ್ರದುರ್ಗದ ಹಿರಿಯೂರಿನ ಬಳಿ ಅಪಘಾತ
- ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಬೆಂಕಿಗೆ ಆಹುತಿ
- ದುರಂತದಲ್ಲಿ ಹಲವರು ಸಜೀವ ದಹನ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿ ಎಚ್ಪಿ ಪೆಟ್ರೋಲ್ ಬಂಕ್ ಬಳಿ ಇಂದು (ಡಿ.25) ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸುಮಾರು 5ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದರೆ ಎಂದು ಶಂಕಿಸಲಾಗಿದೆ.
ಬೆಂಗಳೂರು ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಡಿವೈಡರ್ ಹಾರಿ ಬಂದ ಲಾರಿ, ವೇಗವಾಗಿ ಬಸ್ಗೆ ಗುದ್ದಿದ ಪರಿಣಾಮ ಬಸ್ಸಿನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ. ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅಪಘಾತದ ರಭಸಕ್ಕೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದ್ದು, ನಿದ್ರೆಗೆ ಜಾರಿದ್ದ ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ..ಬಸ್ಸಿನಲ್ಲಿ ಸುಮಾರು 32ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಲಾರಿ ಚಾಲಕ ಕೂಡ ಬೆಂಕಿಗೆ ಆಹುತಿಯಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಸ್ ನಂಬರ್ KA-01 AE-5217
25 ಪ್ರಯಾಣಿಕರು ಗೋಕರ್ಣಕ್ಕೆ ತೆರಳುತ್ತಿದ್ದರು. ಈ ಪೈಕಿ ಇಬ್ಬರು ಶಿವಮೊಗ್ಗಕ್ಕೆ, ಇಬ್ಬರು ಕುಮಟಾಗೆ ಟಿಕೆಟ್ ಬುಕ್ ಮಾಡಿದ್ದರು ಎಂದು ಹೇಳಲಾಗಿದೆ. ಖಾಸಗಿ ಬಸ್ ಬೆಂಗಳೂರಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿದ್ದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.