ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದ ಅಯ್ಯಪ್ಪ ಬೆಟ್ಟದ ಮೇಲಿರುವ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯ.
- ಶ್ರೀ ಶನೈಶ್ಚರ ದೇವ
- ಮಗ್ಗುಲ ಗ್ರಾಮ
ವಿರಾಜಪೇಟೆ: ತಾಲೂಕಿನ ಕರ್ಮಫಲದಾತನಾಗಿ ನೆಲೆಸಿರುವ ಶ್ರೀ ಶನೈಶ್ಚರ ದೇವ ಭಕ್ತರ ಕಷ್ಟ-ಕಾರ್ಪಣ್ಯ ದೂರ ಮಾಡುವ ಜತೆಗೆ ದೋಷ ನಿವಾರಿಸಿ ಭಕ್ತರ ಇಷ್ಟಾರ್ಥ ನೆರವೇರಿಸುವ ದೈವವಾಗಿದ್ದಾನೆ.
ತಾಲೂಕಿನ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯಕ್ಕೆ ಸುಮಾರು 70 ವರ್ಷ ಇತಿಹಾಸವಿದೆ.
ದೇವಾಲಯ ಇತಿಹಾಸ: ಹಾಸನ ಜಿಲ್ಲೆಯಿಂದ ಕುಟುಂಬವನ್ನು ತ್ಯಜಿಸಿ 16ನೇ ವಯಸ್ಸಿನಲ್ಲಿ ವಿ.ಜಿ.ಕೃಷ್ಣಪ್ಪ ಎಂಬುವರು ಏಕಾಂಗಿಯಾಗಿ ಬಂದು ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸುತ್ತಾರೆ. ನಂತರ ಅವರಿಗೆ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿ ಮೂಡುತ್ತದೆ. ಶನಿ ಮಹಾತ್ಮೆ ಹಾಗೂ ಶನಿಗೆ ಸಂಬಂಧಿಸಿದ ಕಥೆಗಳನ್ನು ಆಧರಿಸಿ ನಾಟಕ ಮಾಡಲಾಗುತ್ತಿದ್ದು, ಅದರಲ್ಲಿ ಕೃಷ್ಣಪ್ಪ ಶನಿ ಪಾತ್ರ ಮಾಡುತ್ತಾರೆ. ಇದು ದಿನ ಕಳೆದಂತೆ ಮೈ ಮೇಲೆ ಶನಿ ಆವಾಹನೆಯಾಗುತ್ತದೆ. ನಂತರದಲ್ಲಿ ಕೃಷ್ಣಪ್ಪ ಅವರು ಗುಡಿ ನಿರ್ಮಿಸಿ ಶನಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲು ಆರಂಭಿಸುತ್ತಾರೆ. ಶನಿವಾರ ದರ್ಶನ ಸೇವೆ ಆರಂಭವಾಗುತ್ತಿದ್ದಂತೆ ಸಣ್ಣಗುಡಿ ಭಕ್ತರ ನೆರವಿನಿಂದ ಅಭಿವೃದ್ಧಿಯಾಗಿದೆ. ದೇವಳದ ಆವರಣದಲ್ಲಿ ದುರ್ಗೆ ಹಾಗೂ ನಾಗನನ್ನು ಪ್ರತಿಷ್ಠಾಪಿಸಲಾಗಿದೆ.
ವಿಶೇಷ ಪೂಜೆ ಹಾಗೂ ಹರಕೆ: ಶನಿದೆಸೆ ಹಾಗೂ ಇತರ ದೋಷ ಇರುವವರು ಇಲ್ಲಿ ಶನಿಜಪ ಮಾಡುತ್ತಾರೆ. ಕೆಲಸ ಕಾರ್ಯಗಳಿಗೆ ಅಡ್ಡಿ, ಲಗ್ನಕ್ಕೆ ಅಡ್ಡಿ, ಸಂತಾನ ಅಡ್ಡಿ, ವೈವಾಹಿಕ ಜೀವನದ ಅಡಚಣೆ ಸೇರಿದಂತೆ ಇತರ ಸಮಸ್ಯೆ ನಿವಾರಣೆಗೆ ಹರಕೆ ಕಟ್ಟುತ್ತಾರೆ. ಹರಕೆ ಫಲಿಸಿದ ನಂತರ ದೇವರಿಗೆ ಎಳ್ಳೆಣ್ಣೆ , ಕಪ್ಪು ಎಳ್ಳು, ದೀಪಾಲಂಕಾರ , ಅನ್ನಸಂತರ್ಪಣೆ ನಡೆಸುವ ಮೂಲಕ ಹರಕೆ ಒಪ್ಪಿಸುತ್ತಾರೆ. ಮನೆ-ಮನೆ ಬೆಳಗುವ ಕಾರ್ಯಗಳಿಗೆ ದೀಪದ ಹರಕೆ, ಶಾಂತಿ ಹಾಗೂ ದೋಷ ನಿವಾರಣೆಗೆ ಎಳ್ಳೆಣ್ಣೆ , ಕಪ್ಪು ವಸ್ತ್ರ ಅರ್ಪಿಸುತ್ತಾರೆ.
ಶನೈಶ್ಚರ ದೇವಾಲಯದಲ್ಲಿ ನಿತ್ಯ ಬೆಳಗ್ಗೆ ದೇವರಿಗೆ ದೈನಂದಿನ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ಶನಿವಾರ ವಿಶೇಷವಾಗಿ ಬೆಳಗ್ಗೆ 6 ರಿಂದ ಮಧ್ಯಾಹ್ನದವರೆಗೆ ಶನಿ ಜಪ, ಶನಿಶಾಂತಿ ಪೂಜೆ ಹಾಗೂ ಮಧ್ಯಾಹ್ನ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಶನಿಗೆ ಮುಖ್ಯವಾಗಿ ಶ್ರಾವಣ ಶನಿವಾರದಂದು ವಿಜೃಂಭಣೆಯಿಂದ ಪೂಜೆ ನೆರವೇರಿಸಲಾಗುತ್ತದೆ. ಶ್ರಾವಣ ಶನಿವಾರದಂದು ಬೆಳಗ್ಗೆ 5 ರಿಂದ ಪೂಜಾ ಕಾರ್ಯಗಳು ನಡೆಯುತ್ತದೆ. ಮಧ್ಯಾಹ್ನದಿಂದ ರಾತ್ರಿ 8 ಗಂಟೆವರೆಗೆ ನಿರಂತರ ಅನ್ನಸಂತರ್ಪಣೆ ನಡೆಯುತ್ತದೆ. ಶಿವರಾತ್ರಿಯಂದು ಮಹಾಪೂಜೆ, ಶನೈಶ್ಚರ ಜಯಂತಿ ವಿಶೇಷ ಪೂಜೆ, ನವರಾತ್ರಿ ದುರ್ಗಾಷ್ಟಮಿ ದಿನದಂದು ಆವರಣದಲ್ಲಿನ ದುರ್ಗಾ ದೇವಿಗೆ ವಿಶೇಷ ಪೂಜೆ ನೆರವೇರುತ್ತದೆ. ನಾಗರ ಪಂಚಮಿ ಹಾಗೂ ಸುಬ್ರಹ್ಮಣ್ಯ ಷಷ್ಠಿ ದಿನದಂದು ನಾಗನಿಗೆ ವಿಶೆಷ ಪೂಜೆ ನೆರವೇರುತ್ತದೆ.
ತಲುಪುವ ಮಾರ್ಗ: ವಿರಾಜಪೇಟೆ ನಗರದಿಂದ ಒಂದು ಕಿಲೋಮೀಟರ್ ದೂರದಲ್ಲಿ ದೇವಾಲಯವಿದ್ದು, ವಿರಾಜಪೇಟೆ-ಅಮ್ಮತ್ತಿ ಸಂಪರ್ಕ ರಸ್ತೆಯಲ್ಲಿ ಸಾಗಬೇಕು. ರಸ್ತೆಯ ಎಡ ಭಾಗದಲ್ಲಿ ಬೆಟ್ಟದ ಮೇಲಿನ ಅಯ್ಯಪ್ಪ ದೇವಾಲಯಕ್ಕೆ ಸಾಗುವ ರಸ್ತೆ ಮೂಲಕ ಸಾಗಿದರೆ ಬೆಟ್ಟದ ಮೇಲೆ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯ ಕಾಣ ಸಿಗುತ್ತದೆ.
ವಿವಿಧ ರೀತಿಯ ಸಮಸ್ಯೆಗಳಿಗೆ ಶನೈಶ್ಚರ ದೇವಾಲಯದಲ್ಲಿ ಪರಿಹಾರ ಸಿಗುತ್ತದೆ. ಭಕ್ತರ ಇಷ್ಟಾರ್ಥವನ್ನು ಈಡೇರಿಸುವುದರೊಂದಿಗೆ ಹರಕೆ ಸೇವೆ ಮಾಡಿಸುದರಿಂದ ದೋಷ ನಿವಾರಣೆ ಆಗಲಿದೆ. ದೈವದ ಶಕ್ತಿ ನಂಬಿ ವರ್ಷದಿಂದ ವರ್ಷಕ್ಕೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ತಂದೆಯವರ ಕಾಲದಲ್ಲಿ ಶನೈಶ್ಚರ ದೇವಾಲಯ ಪ್ರತಿಷ್ಠಾಪನೆಯಾಗಿದ್ದು, ನಿರಂತರವಾಗಿ ಇಲ್ಲಿನ ಪೂಜೆ ನೆರವೇರಿಸಲಾಗುತ್ತಿದೆ. ವಿಶೇಷವಾಗಿ ನಾಲ್ಕೂ ಶ್ರಾವಣ ಶನಿವಾರದಲ್ಲಿ ಶನಿಯನ್ನು ಪೂಜಿಸಲಾಗುತ್ತದೆ.
ವಿ.ಕೆ.ಯುವರಾಜ್ ಕೃಷ್ಣ ಪ್ರಧಾನ ಅರ್ಚಕರು, ಶನೈಶ್ಚರ ದೇವಾಲಯ, ಮಗ್ಗುಲ
ಭಕ್ತರ ಇಷ್ಟಾರ್ಥ ಈಡೇರುತ್ತಿರುವುದರಿಂದ ಭಕ್ತರಿಂದಲೇ ಈ ದೇವಾಲಯ ಪ್ರಸಿದ್ಧಿಯನ್ನು ಪಡೆಯುತ್ತಿದೆ. ದೇವಾಲಯದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜತೆಗೆ ಅನ್ನಸಂತರ್ಪಣೆಯನ್ನೂ ಮಾಡಲಾಗುತ್ತದೆ. ಭಕ್ತರು ಭಕ್ತಿಯಿಂದ ಏನನ್ನೇ ಬೇಡಿದರೂ ದೈವವು ಅದನ್ನು ನೆರವೇರಿಸುತ್ತದೆ.
ಮಂದೆಯಂಡ ಅಪ್ಪಚ್ಚು ಕಾರ್ಯಪ್ಪ ದೇವತಕ್ಕರು, ಶನೈಶ್ಚರ ದೇವಸ್ಥಾನ, ಮಗ್ಗುಲ