- ಒಂದು ವರ್ಷದ ಬಳಿಕ ಕಡ್ಡಾಯ ವರ್ಗಾವಣೆ
- ಲಾಭಿ, ರಾಜಕೀಯ ಪ್ರಭಾವ ಬೀರುತ್ತಿದ್ದವರಿಗೆ ಸಂಕಷ್ಟ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಶಾಖೆಗಳಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳ ವರ್ಗಾವಣೆ ಕುರಿತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇಲಾಖೆಯಲ್ಲಿ ಕಾರ್ಯಕ್ಷಮತೆ, ಪಾರದರ್ಶಕತೆ ಹಾಗೂ ವೃತ್ತಿಪರತೆ ಹೆಚ್ಚಿಸುವ ಉದ್ದೇಶದಿಂದ ವಿಶೇಷ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯನ್ನು ಒಂದು ವರ್ಷದ ಅವಧಿಯ ನಂತರ ಕಡ್ಡಾಯವಾಗಿ ವರ್ಗಾವಣೆ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇಲ್ಲಿಯವರೆಗೆ ಕೆಲ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮೇಲೆ ಜಾತಿ ಹಾಗೂ ರಾಜಕೀಯ ಪ್ರಭಾವ ಬಳಸಿಕೊಂಡು ಒಂದೇ ಘಟಕದಲ್ಲಿ 10ರಿಂದ 15 ವರ್ಷಗಳವರೆಗೆ ಸೇವೆ ಮುಂದುವರಿಸಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದ ಆಡಳಿತಾತ್ಮಕ ಅಸಮತೋಲನ ಉಂಟಾಗಿದ್ದು, ಸಿಬ್ಬಂದಿಯ ಸಮಾನ ಅವಕಾಶಕ್ಕೂ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ಘಟಕಗಳಲ್ಲಿ ದೀರ್ಘಾವಧಿ ಸೇವೆಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು, ನಿಗದಿತ ಅವಧಿಯ ನಂತರ ಸಿಬ್ಬಂದಿಯನ್ನು ಸಾಮಾನ್ಯ ಘಟಕಗಳಿಗೆ ಅಥವಾ ಬೇರೆ ಘಟಕಗಳಿಗೆ ವರ್ಗಾವಣೆ ಮಾಡುವ ನಿಯಮ ಕಡ್ಡಾಯವಾಗಿ ಜಾರಿಗೊಳಿಸಿದೆ.
ಹೊಸ ಆದೇಶವು ಕರ್ನಾಟಕ ಪೊಲೀಸ್ ಅಕಾಡೆಮಿ, ಸಿಐಡಿ, ರೈಲ್ವೆ ಪೊಲೀಸ್, ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ (ಎಫ್‌ಎಸ್‌ಎಲ್), ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ನಿರ್ದೇಶನಾಲಯ, ಪೊಲೀಸ್ ತರಬೇತಿ ಸಂಸ್ಥೆಗಳು, ಪೊಲೀಸ್ ದೂರುಗಳ ಪ್ರಾಧಿಕಾರ, ಗುಪ್ತವಾರ್ತೆ (ಇಂಟೆಲಿಜೆನ್ಸ್ )ಸೇರಿ ಸುಮಾರು 20ಕ್ಕೂ ಹೆಚ್ಚು ವಿಶೇಷ ಘಟಕಗಳಿಗೆ ಅನ್ವಯವಾಗಲಿದೆ.
ದಶಕಗಳಿಂದ ಇದೇ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಹಂತ ಹಂತವಾಗಿ ಬೇರೆಡೆ ನಿಯೋಜಿಸಲು ಇಲಾಖೆ ಸಿದ್ಧತೆ ನಡೆಸಿದೆ. ಇಲಾಖೆಯ ಈ ಕ್ರಮದಿಂದ ವಿಶೇಷ ಘಟಕಗಳಲ್ಲಿ ಸಿಬ್ಬಂದಿಯ ನಿಯಮಿತ ಪರಿವರ್ತನೆ ಸಾಧ್ಯವಾಗುವುದರ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿತನ ಮತ್ತು ಕಾರ್ಯಕ್ಷಮತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.
- ವಿಶೇಷ ಶಾಖೆಯಲ್ಲಿ ಕರ್ತವ್ಯದ ಅವಧಿ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರಲಿದೆ.
- ಹೊಸದಾಗಿ ನಿಯೋಜನೆಗೊಳ್ಳುವ ಸಿಬ್ಬಂದಿ ಕನಿಷ್ಠ 15 ದಿನಗಳ ಗುಪ್ತವಾರ್ತೆಯಲ್ಲಿ ತರಬೇತಿ ಪಡೆದಿರಬೇಕು.
- ತರಬೇತಿ ಪಡೆದವರನ್ನೇ ವಿಶೇಷ ಶಾಖೆಗೆ ನಿಯೋಜಿಸಲಾಗುವುದು.
- ಒಂದು ವರ್ಷದ ಕರ್ತವ್ಯ ಪೂರೈಸಿದ ಸಿಬ್ಬಂದಿಯನ್ನು ಕಡ್ಡಾಯವಾಗಿ ದೈನಂದಿನ ಕಾರ್ಯ ನಿರ್ವಾಹಕ ಕರ್ತವ್ಯಕ್ಕೆ ಮರುನಿಯೋಜನೆ.
- ಈ ಆದೇಶವನ್ನು ಘಟಕಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.