ಹುಮನಾಬಾದ್​ ಹೊರವಲಯದ ಕೈಗಾರಿಕಾ ಪ್ರದೇಶದ ಕಂಪನಿಗಳಿಗೆ ಲೋಕಾಯುಕ್ತ ಎಸ್​ಪಿ ಸಿದ್ದರಾಜು ನೇತೃತ್ವದ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಹಸೀಲ್ದಾರ್​ ಜಗದೀಶ ಚೌರಾ, ಡಿವೈಎಸ್ಪಿ ಮಡೋಳಪ್ಪ ಪಿ.ಎಸ್​., ಬೀದರ್​ ಲೋಕಾಯುಕ್ತ ಡಿವೈಎಸ್ಪಿ ಹನುಮಂತ, ತಾಪಂ ಇಒ ದೀಪಿಕಾ ನಾಯ್ಕರ್​ ಇತರರಿದ್ದರು. 
ರಾಜ್ಯ

ಲೋಕಾ ಎಸ್​ಪಿ ದಿಢೀರ್​ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಹುಮನಾಬಾದ್​ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ
ಹುಮನಾಬಾದ್​: ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಔಷಧ ಹಾಗೂ ರಾಸಾಯನಿಕ ಕಾರ್ಖಾನೆಗಳಿಗೆ ಕಲಬುರಗಿ ಲೋಕಾಯುಕ್ತ ಎಸ್​ಪಿ ಸಿದ್ದರಾಜು ನೇತೃತ್ವದ ತಂಡ ಸೋಮವಾರ ದಿಢೀರ್​ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಪರಿಶೀಲಿಸಿತು.
ಲಕ್ಷಿ$್ಮ ದುರ್ಗಾ ಡ್ರಗ್ಸ್​, ಕ್ಷತ್ರಿಯ ಲ್ಯಾಬೊರೇಟರೀಸ್​ ಪ್ರೈವೇಟ್​ ಲಿ., ಸ್ಕೂಟಿಕ್​ ಲ್ಯಾಬ್ಸ್​ ಪ್ರೈವೇಟ್​ ಲಿ., ಆರ್​-&ಕೆಮ್​ ಪ್ರೈವೇಟ್​ ಲಿ., ರಾಡಿಸನ್​ ಲ್ಯಾಬ್ಸ್​ ಪ್ರೈವೇಟ್​ ಲಿ., ಸತ್ಯದಿಪ್ತ ಫಾಮಾರ್ಸ್ಯುಟಿಕಲ್ಸ್​, ಕೆಎಸ್​ಟಿ ಫಾಮಾರ್ಸ್ಯುಟಿಕಲ್ಸ್​ ಹಾಗೂ ಕೋರೆ ಕಂಪನಿ ಸೇರಿ ಒಂಬತ್ತು ಕಾರ್ಖಾನೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಎಸ್​ಪಿ ಸಿದ್ದರಾಜು, ಲೋಕಾಯುಕ್ತ ಉಪ ನ್ಯಾಯಮೂರ್ತಿಗಳ ನಿರ್ದೇಶನದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿನ ಕೆಲ ಕಾರ್ಖಾನೆಗಳು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಎಸ್​ಒಪಿ (ಸ್ಟಾಂಡರ್ಡ್​ ಆಪರೇಟಿಂಗ್​ ಪ್ರೋಸಿಜರ್​) ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂಬುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.
ಕಾರ್ಖಾನೆಗಳಿಂದ ಹೊರಬರುವ ಹೊಗೆ, ರಾಸಾಯನಿಕ ತ್ಯಾಜ್ಯ ನೀರನ್ನು ಹಳ್ಳಗಳಿಗೆ ಹರಿಯಲು ಅವಕಾಶ ಮಾಡಿಕೊಟ್ಟಿರುವುದು ಹಾಗೂ ಕೆಲವೆಡೆ ಚೆಕ್​ಡ್ಯಾಂಗಳನ್ನು ಹಾನಿಗೊಳಪಡಿಸಿ ತ್ಯಾಜ್ಯ ನೀರು ಹರಿಯುವಂತೆ ಮಾಡಿರುವುದು ಗಮನಕ್ಕೆ ಬಂದಿದೆ. ಇದರಿಂದ ವಾಯು, ಜಲ ಮತ್ತು ಅಂತರ್ಜಲ ಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಹುಮನಾಬಾದ್​ ಕೈಗಾರಿಕಾ ಪ್ರದೇಶದಲ್ಲಿರುವ 47 ಕಾರ್ಖಾನೆಗಳಲ್ಲಿ 18 ರೆಡ್​ ಕ್ಯಾಟಗರಿಗೆ ಸೇರಿವೆ. ಈ ಪೈಕಿ ಒಂಬತ್ತು ಕಾರ್ಖಾನೆಗಳನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್​ ಜಗದೀಶ ಚೌರಾ, ಡಿವೈಎಸ್ಪಿ ಮಡೋಳಪ್ಪ ಪಿ.ಎಸ್​., ಬೀದರ್​ ಲೋಕಾಯುಕ್ತ ಡಿವೈಎಸ್ಪಿ ಹನುಮಂತ, ತಾಪಂ ಇಒ ದೀಪಿಕಾ ನಾಯ್ಕರ್​, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಆದಮ್​ ಪಟೇಲ್​, ಸಂತೋಷ, ಜಗದೀಶ, ಪಿಡಿಒ ಜಗದೇವಿ ಹನುಮಂತ, ಆರ್​ಐ ರಾಹುಲ್​ ಪ್ರಸಾದ್​, ಕಾರ್ಮಿಕ ಅಧಿಕಾರಿ ರಾಹುಲ್​ ಇತರರಿದ್ದರು
ಆರ್​-ಕೆಮ್​, ಸತ್ಯದಿಪ್ತ ಕಂಪನಿ ವಿರುದ್ಧ ಆಕ್ಷೇಪ
ಆರ್​&-ಕೆಮ್​ ಪ್ರೈವೇಟ್​ ಲಿಮಿಟೆಡ್​ ಹಾಗೂ ಸತ್ಯದಿಪ್ತ ಫಾಮಾರ್ಸ್ಯುಟಿಕಲ್ಸ್​ ಕಂಪನಿಗಳಲ್ಲಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ ಕಂಡುಬಂದಿದೆ ಎಂದು ಲೋಕಾಯುಕ್ತ ಎಸ್​ಪಿ ಸಿದ್ದರಾಜು ಹೇಳಿದರು. ಸತ್ಯದಿಪ್ತ ಫಾಮಾರ್ಸ್ಯುಟಿಕಲ್ಸ್​ನಲ್ಲಿ ಐದು ತಿಂಗಳಿಂದ ರಾಸಾಯನಿಕ ತ್ಯಾಜ್ಯ ಸಂಗ್ರಹಿಸಿಟ್ಟಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ವಿಚಾರಿಸಿದಾಗ, ಕಲ್ಯಾಣ ಕರ್ನಾಟಕ ತ್ಯಾಜ್ಯ ವಿಲೇವಾರಿ ಸಂಸ್ಥೆ ಸಮಯಕ್ಕೆ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಸಂಗ್ರಹಿಸಿಡಲಾಗಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಯಿಂದ ವರದಿ ಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
"

ಬಹುತೇಕ ಕಾರ್ಖಾನೆಗಳು ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದ್ದು, ಸಮಗ್ರ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು.

— > ಸಿದ್ದರಾಜು ಲೋಕಾಯುಕ್ತ ಎಸ್​ಪಿ, ಕಲಬುರಗಿ