ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ
- ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಹೇಳಿಕೆ
- ಆಡಿಯೋದಲ್ಲಿರುವ ಧ್ವನಿ ನನ್ನದೆ
- ತನಿಖೆಗೆ ಸಂಪೂರ್ಣ ಸಹಕಾರ
ಶಿರಹಟ್ಟಿ: ಆಡಿಯೋದಲ್ಲಿರುವ ಧ್ವನಿ ನನ್ನದೆ. ಆದರೆ, ಅದು ಸುಮಾರು ಒಂದು ವಷರ್ದ ಹಿಂದಿನದ್ದು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ಸಿಟ್ಟಿನಲ್ಲಿ ಮಾತನಾಡಿದ್ದೆ. ಲೋಕಾಯುಕ್ತ ದಾಳಿ ಅಥವಾ ಲಂಚ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಸ್ಪಷ್ಟಪಡಿಸಿದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧದ ಲಂಚ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಸಂಬಂಧ ಅವರು ಸೋಮವಾರ ಪ್ರತಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಶಾಸಕರ ವಿರುದ್ಧ ದೂರು ನೀಡಿರುವ ಗುತ್ತಿಗೆದಾರನಿಗೂ ನನಗೂ ಪರಿಚಯವಿಲ್ಲ. ನನ್ನ ಮೇಲೆ ಅನುಮಾನ ಇದ್ದರೆ, ನನ್ನ ಎರಡೂ ಮೊಬೈಲ್‌ಗಳನ್ನು ಪೊಲೀಸರು ಪರಿಶೀಲಿಸಬಹುದು. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಸ್ವಾಮೀಜಿ ತಿಳಿಸಿದರು.
ವೈರಲ್ ಆಗಿರುವ ಆಡಿಯೋದಲ್ಲಿ ಮುಂದಿನ ಚುನಾವಣೆಯಲ್ಲಿ ಚಂದ್ರು ಲಮಾಣಿ ಅವರಿಗೆ ಟಿಕೆಟ್ ತಪ್ಪಿಸಬೇಕು, ಬೆಂಗಳೂರಿನಲ್ಲಿ ಒಂದು ತಂಡ ಇದೆ, ನೋಟಿಸ್‌ಗೆ ಪೌಡರ್ ಹಚ್ಚಿ ಐಟಿಗೆ ಒಗಿಸಿಬಿಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಸಂಭಾಷಣೆ ಸ್ವಾಮೀಜಿ ಮತ್ತು ಅನಾಮಿಕ ವ್ಯಕ್ತಿಯ ನಡುವೆ ನಡೆದದ್ದು ಎಂಬ ಮಾತು ಕೇಳಿ ಬಂದಿದ್ದವು.
ಆಡಿಯೋ ಬಹಿರಂಗಗೊಂಡ ಬಳಿಕ, ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಬಿಜೆಪಿ ಕಾರ್ಯಕರ್ತರು ಪ್ರಕರಣದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ.