ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಹಾಗೂ ನಗರದ ವಿವಿಧ ಭಾಗಗಳಲ್ಲಿ ನಿರ್ಮಾಣವಾಗಿರುವ ಬ್ಲಾಕ್ ಸ್ಪಾಟ್ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ನಡೆಸಿದರು.
ಸಮಸ್ಯೆ ನಿವಾರಣೆಗೆ ಈ ಹಿಂದೆ ಹಲವು ನಿರ್ದೇಶನಗಳನ್ನು ನೀಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಅಲ್ಲದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಗೆ ನಿರಂತರವಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಪರಿಣಾಮ ಜುಲೈ 29ರಂದು ಪ್ರಾಧಿಕಾರದ ಐದು ನಗರ ಪಾಲಿಕೆಗಳ ಆಯುಕ್ತರು ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲೂಎಂಎಲ್) ಅಧಿಕಾರಿಗಳನ್ನು ವಿಚಾರಣೆಗೆ ಹಾಜರುಪಡಿಸಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಪಾಲಿಕೆಗಳ ಭರವಸೆ:
ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 168 ಬ್ಲಾಕ್ ಸ್ಪಾಟ್‌ಗಳ ಪೈಕಿ ಆಗಸ್ಟ್ 15ರ ಒಳಗೆ 50 ಸ್ಥಳಗಳನ್ನು ಸಂಪೂರ್ಣ ತೆರವುಗೊಳಿಸಿ, ಮತ್ತೆ ಕಸ ಸಂಗ್ರಹವಾಗುವುದನ್ನು ತಡೆಯುವುದಾಗಿ ಆಯುಕ್ತ ರಮೇಶ್ ಸಭೆಯಲ್ಲಿ ಹೇಳಿದರು.
ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 385 ಬ್ಲಾಕ್ ಸ್ಪಾಟ್‌ಗಳ ಪೈಕಿ 155 ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ 230ರಲ್ಲಿ ಕನಿಷ್ಠ 150 ಬ್ಲಾಕ್ ಸ್ಪಾಟ್‌ಗಳನ್ನು ಆಗಸ್ಟ್ 15ರ ಒೂಳಗೆ ತೆರವುಗೊಳಿಸುವುದಾಗಿ ಆಯುಕ್ತ ರಾಜೇಂದ್ರ ಭರವಸೆ ನೀಡಿದರು. ಉತ್ತರ ಪಾಲಿಕೆ ಸುತ್ತಲು 268 ಬ್ಲಾಕ್ ಸ್ಪಾಟ್‌ಗಳ ಪೈಕಿ 171 ಈಗಾಗಲೇ ತೆರವುಗೊಂಡಿದ್ದು, ಉಳಿದ 97ರಲ್ಲಿ ಕನಿಷ್ಠ 50 ಸ್ಥಳಗಳನ್ನು ಆಗಸ್ಟ್ 15ರೊಳಗೆ ತೆರವುಗೊಳಿಸುವುದಾಗಿ ಆಯುಕ್ತ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮಾದೇವಿ ಮಾಹಿತಿ ನೀಡಿ, ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಮೊದಲ ಹಂತದಲ್ಲಿ ಸಿ.ವಿ. ರಾಮನ್ ನಗರ ಹಾಗೂ ಶಾಂತಿನಗರ ಪ್ರದೇಶಗಳಲ್ಲಿ ಆಗಸ್ 15ರೊಳಗೆ 500 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಎಂದರು.
ಇದೇ ವೇಳೆ, ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 5,837 ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸಲಾಗಿದೆ. ಶೀಘ್ರದಲ್ಲಿ 1,000 ತ್ಯಾಜ್ಯ ಸಂಸ್ಕಾರಕಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಲೋಕಾಯುಕ್ತರ ಮುಂದೆ ಭರವಸೆ ನೀಡಿದರು.
ಪ್ರಮುಖ ನಿರ್ದೇಶನಗಳು:
- ಎಲ್ಲ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಕನಿಷ್ಠ ಎರಡು ವಾರ್ಡ್‌ಗಳಲ್ಲಿ ಪಾಲಿಕೆಯೇ ಟಿಪ್ಪರ್ ವಾಹನಗಳನ್ನು ಖರೀದಿಸಿ, ಜಿಪಿಎಸ್ ಹೊಂದಿದ ವಾಹನಗಳ ಮೂಲಕ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಬೇಕು.
- ಜಿಪಿಎಸ್ ಇಲ್ಲದ ಎಲ್ಲ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು.ಹಳೆಯ ಹಾಗೂ ಜಿಪಿಎಸ್ ಸೌಲಭ್ಯವಿಲ್ಲದ ವಾಹನಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು.
- ಕಿರಿಯ ಆರೋಗ್ಯ ಪರಿವೀಕ್ಷಕರು, ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳು ಬ್ಲಾಕ್ ಸ್ಪಾಟ್‌ಗಳ ಮೇಲ್ವಿಚಾರಣೆ ನಡೆಸಬೇಕು. ಕರ್ತವ್ಯ ಲೋಪ ಕಂಡುಬಂದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು.
- ಪೌರಕಾರ್ಮಿಕರು ಮುಖ್ಯ ರಸ್ತೆಗಳಿಗೆ ಮಾತ್ರ ಸೀಮಿತವಾಗದೆ, ವಸತಿ ಪ್ರದೇಶಗಳಲ್ಲಿಯೂ ಕಸ ಸಂಗ್ರಹವಾಗುವಂತೆ ಸಹಾಯಕ ಪ್ರಧಾನ ವ್ಯವಸ್ಥಾಪಕರು ನಿಗಾ ವಹಿಸಬೇಕು.
- ನಿಯಮ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ದಂಡ ವಸೂಲಿ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಬೇಕು.