ರಾಜ್ಯ

ಸಚಿವರ ಗಾದಿಗೆ ಲೋಕಲ್ ವಾರ್ ಟೆಸ್ಟ್: ಗೆಲ್ಲಿಸಿಕೊಂಡು ಬಂದವರಿಗೆ ಉಳಿಯಲಿದೆ ಮಂತ್ರಿಗಿರಿ | ಸೋತರೆ ಅಧಿಕಾರಕ್ಕೆ ಕತ್ತರಿ!

ಶಿವಪ್ರಸಾದ್ ಅರ್ಜುನಹಳ್ಳಿ, ಬೆಂಗಳೂರು

ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಕಾವು ದಿನೇದಿನೆ ಏರುತ್ತಿರುವ ನಡುವೆಯೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹಾಲಿ ಸಚಿವರ ಭವಿಷ್ಯ ನಿರ್ಧರಿಸುವ ಮಾನದಂಡವಾಗಲಿದೆ ಎಂಬ ಬಲವಾದ ಚರ್ಚೆ ಸರ್ಕಾರ ಹಾಗೂ ಕಾಂಗ್ರೆಸ್​ನೊಳಗೆ ಕಂಪನ ಎಬ್ಬಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಆಧರಿಸಿ ಸಚಿವರ ಮೌಲ್ಯಮಾಪನ ನಡೆಸಲು ಹೈಕಮಾಂಡ್ ನಿರ್ಧರಿಸಿರುವುದು ಹೊಸ ಬೆಳವಣಿಗೆ. ತಮ್ಮ ತಮ್ಮ ಜಿಲ್ಲೆಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಜತೆಯಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಗೆಲುವು ತಂದುಕೊಡುವ ಜವಾಬ್ದಾರಿಯನ್ನು ವರಿಷ್ಠರು ಸಚಿವರ ಹೆಗಲ ಮೇಲೆ ಹೊರಿಸಿದ್ದಾರೆ.

ಸಚಿವ ಸ್ಥಾನದಲ್ಲಿ ಮುಂದುವರಿಯಲು ಹಾಲಿ ಮಂತ್ರಿಗಳು ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಲೇಬೇಕು. ಒಂದು ವೇಳೆ ಚುನಾವಣೆಯಲ್ಲಿ ಫಲಿತಾಂಶ ವ್ಯತಿರಿಕ್ತವಾಗಿ ಬಂದು, ಪಕ್ಷಕ್ಕೆ ಹಿನ್ನಡೆಯಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನದಿಂದ ತೆಗೆದುಹಾಕಲು ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಕ್ರಾಂತಿ ಬಳಿಕವೇ ಸಂಪುಟ ಸರ್ಜರಿ

ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಹಾಗೂ ಫಲಿತಾಂಶದ ನಂತರ, ಸಂಕ್ರಾಂತಿಯ ವೇಳೆಗೆ ಸಚಿವ ಸಂಪುಟಕ್ಕೆ ಸರ್ಜರಿ ನಡೆಯುವುದು ಬಹುತೇಕ ಖಚಿತವಾಗಿದೆ. ಸಚಿವ ಸ್ಥಾನ ಸ್ವೀಕರಿಸಿ ಸುಮಾರು 4 ವರ್ಷಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಪುಟವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಪುನಾರಚಿಸಲು ನಾಯಕರು ಸಜ್ಜಾಗಿದ್ದಾರೆ.

ಮಹಿಳಾ ಪ್ರಾತಿನಿಧ್ಯದ ಕೂಗು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಕಳೆದ ಐದು ತಿಂಗಳಿಂದ ಖಾಲಿ ಇರುವ ಮಹಿಳಾ ಕೋಟಾ ಭರ್ತಿಗೆ ಬಲವಾದ ಕೂಗು ಕೇಳಿ ಬರುತ್ತಿದೆ. ಸದ್ಯ ವರಿಷ್ಠರು ಸಂಪುಟದ ಜೇನುಗೂಡಿಗೆ ಕೈ ಹಾಕದೆ, ಅಂತರ ಕಾಯ್ದುಕೊಂಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆಗೆ ಮಹಿಳೆಗೆ ಸಂಪುಟದಲ್ಲಿ ಸ್ಥಾನ ನೀಡಲಿ ಎಂಬ ನಿರೀಕ್ಷೆ ಪಕ್ಷದ ಮಹಿಳಾ ಶಾಸಕಿಯರದ್ದಾಗಿದ್ದು, ಈ ನಿಟ್ಟಿನಲ್ಲಿ ಹಲವು ಸಂಘಟನೆಗಳಿಂದಲೂ ಒತ್ತಡ ಹೆಚ್ಚಿದೆ.

ದೆಹಲಿ ವರಿಷ್ಠರ ಒಲವೇನು?

  • ಪಕ್ಷ ಸಂಘಟನೆ, ಸರ್ಕಾರದಲ್ಲಿ ಹಿರಿಯರಿಗೆ ಸಮಾನ ಅವಕಾಶ

  • ಅನುಭವಿ ಶಾಸಕರಿಗೆ ಆದ್ಯತೆ ನೀಡಲು ವರಿಷ್ಠರ ಒಲವು

  • ರಾಜೀನಾಮೆ ಪಡೆದ ಎಲ್ಲ ಸಚಿವರಿಗೆ ಸಂಘಟನೆ ಜವಾಬ್ದಾರಿ

  • ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಅನುಭವಿಗಳಿಗೆ ಜವಾಬ್ದಾರಿ

  • ಪ್ರಾದೇಶಿಕ, ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವುದು

  • ಸಮುದಾಯವಾರು ಮತ ಬ್ಯಾಂಕ್ ಗಟ್ಟಿಗೊಳಿಸಲು ನಿಗಾ