Eshwar Khandre | ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ರಾಜ್ಯದಲ್ಲಿ ಶೀಘ್ರವೇ ಜನಪ್ರತಿನಿಧಿಗಳ ಆಡಳಿತವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮುಂಬರುವ ಅಕ್ಟೋಬರ್ ಅಂತ್ಯದೊಳಗೆ ಗ್ರಾಮ, ಪಟ್ಟಣ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಸರ್ಕಾರ ಸಂಪೂರ್ಣ ಆಸಕ್ತಿ ವಹಿಸಿದೆ ಎಂದು ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಗಿದಿದ್ದು ಆಡಳಿತಾಧಿಕಾರಿಗಳ ಮೂಲಕ ಸ್ಥಳೀಯ ಸಂಸ್ಥೆಗಳ ಆಡಳಿತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನಾಡಳಿತ ಆರಂಭಿಸಲು ಸರ್ಕಾರ ಕ್ರಿಯಾಶೀಲವಾಗಿದ್ದು, ಈಗಾಗಲೇ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ನಿಗದಿಯಂತಹ ಪ್ರಕ್ರಿಯೆಗಳು ಸಾಗುತ್ತಿವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಎಚ್ಡಿಕೆಗೆ ತಿರುಗೇಟು!..
ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಖಂಡ್ರೆ, ಅಭಿವೃದ್ಧಿ ವಿಚಾರದಲ್ಲಿ ತಾವು ಎಂದಿಗೂ ಹಿತಾಸಕ್ತಿ ಅಥವಾ ರಾಜಕೀಯ ಮಾಡಿಲ್ಲ ಮತ್ತು ಕುಮಾರಸ್ವಾಮಿ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ ಎಂದರು. ಹೆಚ್‌ಎಂಟಿ ಭೂಮಿಯ ಬಳಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಅನುಮೋದನೆಯಾಗಲೀ ಅಥವಾ ಅಂದಿನ ಅರಣ್ಯ ಸಚಿವರ ಪರವಾನಗಿಯಾಗಲೀ ಇರಲಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರಿ ಅರಣ್ಯ ಭೂಮಿಯನ್ನು ಹಿಂಪಡೆಯಲು ತಾವು ಸೂಚನೆ ನೀಡಿದ್ದಾಗಿ ತಿಳಿಸಿದರು.
ಪ್ರಸ್ತುತ ಈ ವಿಷಯವು ನ್ಯಾಯಾಲಯದಲ್ಲಿದ್ದು, ಕೋರ್ಟ್ ತೀರ್ಪು ಬರುವ ಮುನ್ನವೇ ಕುಮಾರಸ್ವಾಮಿ ಅವರು ತಾವೇ ನಿರ್ಧಾರ ಕೈಗೊಂಡಂತೆ ಹಗುರವಾಗಿ ಮತ್ತು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಹೆಚ್‌ಎಂಟಿ ಭೂಮಿಯು ಕರ್ನಾಟಕದ ಸಾರ್ವಜನಿಕರ ಆಸ್ತಿಯಾಗಿದ್ದು, ಅದರ ರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ ಎಂದು ಖಂಡ್ರೆ ಹೇಳಿದರು.