ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಅವರು ನಗರದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದರು. ಶಿವಲಿಂಗೇಗೌಡ, ಎ.ಬಿ.ರಮೇಶಬಾಬು ಬಂಡಿಸಿದ್ದೇಗೌಡ ಇದ್ದರು. 
ರಾಜ್ಯ

ಖಾಸಗಿ ರಸ್ತೆ ನಿರ್ವಹಣೆ ಹೊಣೆ ಸ್ಥಳೀಯ ಸಂಸ್ಥೆಗೆ!

ಪ್ರಮುಖ ಮುಖ್ಯಾಂಶಗಳು

  • ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮಾಹಿತಿ
  • ಇಲಾಖೆಯಿಂದ ಶೀಘ್ರ ಹೊರ ಬೀಳಲಿದೆ ಆದೇಶ
ಮೈಸೂರು: ಖಾಸಗಿ ರಸ್ತೆಗಳನ್ನು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ತೆಗೆದುಕೊಂಡು ನಿರ್ವಹಿಸಲು ಸಿದ್ಧತೆ ನಡೆಯುತ್ತಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹಾಸನ ಹಾಗೂ ಮಂಡ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಖಾಸಗಿ ರಸ್ತೆಗಳನ್ನು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ತರಲು ತಯಾರಿ ನಡೆಸಿದ್ದು, ಈ ಕುರಿತು ಇಲಾಖೆಯಿಂದ ಆದೇಶ ಹೊರಡಿಸಲಾಗುವುದು ಎಂದರು.
ಆಸ್ತಿಗಳನ್ನು ಎ-ಖಾತಾ ಮತ್ತು ಬಿ-ಖಾತಾ ಕುರಿತು ನಿರ್ಧರಿಸಿ ಖಾತೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಜನಸಂಖ್ಯೆಯಲ್ಲಿ ಅಂದಾಜು ಶೇ.40 ಜನರು ನಗರ ಪ್ರದೇಶದಲ್ಲಿ ವಾಸವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ.30 ಅನುದಾನ ದೊರಕುತ್ತದೆ. ಉಳಿದ ಸಂಪನ್ಮೂಲ ಕ್ರೋಡೀಕರಣಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಾಡಿಗೆಗೆ ನೀಡಲಾಗಿರುವ ವಾಣಿಜ್ಯ ಮಳಿಗೆ ಮಾಲೀಕರು ನಿಗದಿಪಡಿಸಿದ ದಿನಾಂಕದೊಳಗೆ ಬಾಡಿಗೆ ಪಾವತಿಸಬೇಕು. ಇಲ್ಲವಾದಲ್ಲಿ ನೋಟಿಸ್ ಜಾರಿ ಮಾಡಿ ಅಂಗಡಿಯನ್ನು ಮುಚ್ಚಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಯಾಗುತ್ತಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಜಿಲ್ಲಾವಾರು ಪಟ್ಟಿ ಮಾಡಿಕೊಂಡು ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಂಬಂಧಿಸಿದ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ನಿತ್ಯ ಬೆಳಗ್ಗೆ  6ಗಂಟೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಇನ್ನಿತರ ಮೂಲ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಿಂದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಲು ಎರಡು ಎಕರೆ ಭೂಮಿ ಕಾಯ್ದರಿಸುವಂತೆ ಈಗಗಲೇ ತಿಳಿಸಲಾಗಿದೆ. ಕೆಲಸ ಪ್ರಗತಿಯಲ್ಲಿದೆ. ಇದರೊಂದಿಗೆ ಪೌರಕಾರ್ಮಿಕರು ನಿವೃತ್ತಿ ಆದ ನಂತರ ಅವರಿಗೆ ನಿವೇಶನ ಒದಗಿಸಲು ನಗರ ಸ್ಥಳೀಯ ಸಂಸ್ಥೆಯ ಹೊರಭಾಗ ಅಥವಾ ಗ್ರಾಮೀಣ ಭಾಗದಲ್ಲಿ 5 ಎಕರೆ ಭೂಮಿ ಕಾಯ್ದಿರಿಸಲು ಪೌರಾಡಳಿತ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುವುದು ಎಂದರು.

ಹಾಸನ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ 

ಅಬಕಾರಿ ಸಚಿವ ಶಿವಲಿಂಗೇಗೌಡ ಮಾತನಾಡಿ, ಹಾಸನ ಜಿಲ್ಲೆಯ ಬಹಳಷ್ಟು ಪಟ್ಟಣ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಕನಿಷ್ಠ ಸಂಖ್ಯೆಯಲ್ಲಿಯಾದರೂ ಸಿಬ್ಬಂದಿಯನ್ನು ನಿಯೋಜಿಸಿಕೊಡಬೇಕು. ಪೌರಾಡಳಿತ ಸಚಿವರು ವಿಭಾಗಮಟ್ಟದಲ್ಲಿ ಅಧಿಕಾರಿಗಳಿಗೆ ನೀಡಲಾಗಿರುವ ಸೂಚನೆ ಅನುಷ್ಠಾನ ಮಾಡಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಪರಿಶೀಲಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಡಳಿತ ಸಚಿವರು, ಬೇರೆ ಇಲಾಖೆಗೆ  ನಿಯೋಜನೆಯ ಮೇಲೆ ತೆರಳಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹಿಂಪಡೆದು ಪೌರಾಡಳಿತ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಜಾಗಕ್ಕೆ ನಿಯೋಜಿಸಲಾಗುವುದು. ಹೆಚ್ಚಿನ ಅನುದಾನ ಕ್ರೋಡೀಕರಣವಾಗುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮಾನುಸಾರ ಹೊರಗುತ್ತಿಗೆ ಆಧಾರದ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅರಸೀಕೆರೆ ನಗರಸಭೆ ವ್ಯಾಪ್ತಿಯಲ್ಲಿರುವ ಕೆಲವು ಕಟ್ಟಡಗಳಿಗೆ ಬಾಡಿಗೆಗೆ ಜನರು ಬರುತ್ತಿಲ್ಲ. ಇದರಲ್ಲಿ ಕೆಲವು ಮಾರ್ಪಾಟು ಮಾಡಿ ಹಾಸ್ಟೆಲ್‌ಗಳಿಗೆ ಬಾಡಿಗೆ ನೀಡಬಹುದು. ಇದಕ್ಕೆ ಪೌರಾಡಳಿತ ಇಲಾಖೆ ಅನುಮತಿ ನೀಡಬೇಕಿದೆ ಎಂದು ಅಬಕಾರಿ ಸಚಿವ ಶಿವಲಿಂಗೇಗೌಡ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎ.ಮಂಜು, ಎ.ಬಿ.ರಮೇಶಬಾಬು ಬಂಡಿಸಿದ್ದೇಗೌಡ, ಪೌರಾಡಳಿತ ಇಲಾಖೆ ನಿರ್ದೇಶಕ ಪಿ.ರವೀಂದ್ರ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.