ಬಂಗಾರಪೇಟೆ: ಪಟ್ಟಣದ ಬಿಜಿಟಿ ಮಾಂಸಾಹಾರಿ ಹೋಟೆಲ್ನಲ್ಲಿ ಮಂಗಳವಾರ ಮಹಿಳೆ ಖರೀದಿಸಿದ್ದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾದ ವಿಷಯ ತಿಳಿದು ಬುಧವಾರ ಆಹಾರ ಭದ್ರತಾ ಅಧಿಕಾರಿ ಪ್ರತಿಶ್ ರೆಡ್ಡಿ ಹೋಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಹೋಟೆಲ್ ಮಾಲೀಕ ರವಿ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಕೋಲಾರದ ಆಸ್ಪತ್ರೆಗೆ ದಾಖಲು
ನೇರಳೆಕೆರೆ ಗ್ರಾಮದ ಲಲಿತಾ ಮಂಗಳವಾರ ಸಂಜೆ 4.30ಕ್ಕೆ ನಗರದ ಮುರುಗರ್ ದೇವಸ್ಥಾನ ಪಕ್ಕದ ಹೋಟೆಲ್ಗೆ ಬಂದು ಬಿರಿಯಾನಿ ಆರ್ಡರ್ ಮಾಡಿ ಅರ್ಧದಷ್ಟು ಬಿರಿಯಾನಿ ಸೇವಿಸಿದ ಬಳಿಕ ಸತ್ತ ಹಲ್ಲಿ ಪತ್ತೆಯಾಗಿತ್ತು. ಹಲ್ಲಿ ಕಂಡ ತಕ್ಷಣ ಹೋಟೆಲ್ ಮಾಲೀಕ ರವಿಯ ಗಮನಕ್ಕೆ ತಂದಿದ್ದಾರೆ. ಈ ವೇಳೆ ಮಾಲೀಕರು ಪ್ಲೇಟ್ನಿಂದ ಹಲ್ಲಿ ತೆಗೆದುಹಾಕಿ, ಮತ್ತೊಂದು ಬಿರಿಯಾನಿ ತಂದು ನೀಡಿದ್ದರು. ಆದರೆ ಹಲ್ಲಿ ಕಂಡ ಆಘಾತದಿಂದ ಲಲಿತಾಗೆ ವಾಂತಿ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದುವರೆಗೂ ಮಾನವೀಯತೆಯಿಂದಾದರೂ ಹೋಟೆಲ್ ಮಾಲೀಕ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿಲ್ಲ.
ಬಿರಿಯಾನಿ ಸೇವಿಸಿದ ನೇರಳೆಕೆರೆ ಗ್ರಾಮದ ಲಲಿತಾ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಹೋಟೆಲ್ ಬಂದ್ ಮಾಡುವಂತೆ ಅಧಿಕಾರಿ ಸೂಚನೆ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲೀಕ, ಹೋಟೆಲ್ ಮುಚ್ಚಿದರೆ ಆಹಾರ ವ್ಯರ್ಥವಾಗುತ್ತದೆ. ಮುಚ್ಚಲು ಸಾಧ್ಯವಿಲ್ಲ ಎಂದು ವಾದಿಸಿದರು. ಅಧಿಕಾರಿಗಳು ಕಾನೂನು ನಿಯಮ ಉಲ್ಲೇಖಿಸಿ ಹೋಟೆಲ್ ಮುಚ್ಚಲೇಬೇಕೆಂದು ಸೂಚಿಸಿದ ಬಳಿಕ ಅನಿವಾರ್ಯವಾಗಿ ಹೋಟೆಲ್ ಬಂದ್ ಮಾಡಿದರು.
ಹೋಟೆಲ್ ಮುಚ್ಚಲು ಹೇಳಿದಕ್ಕೆ ಆಹಾರ ಭದ್ರತಾ ಅಧಿಕಾರಿ ಪ್ರತಿಶ್ ರೆಡ್ಡಿ ಮತ್ತು ಬಿಜಿಟಿ ಹೋಟೆಲ್ ಮಾಲೀಕ ರವಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೋಟೆಲ್ ರ್ನಿಲಕ್ಷ$್ಯದಿಂದ ಆರೋಗ್ಯಕ್ಕೆ ತೊಂದರೆಯಾಗಿದೆ. ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿರುವ ಹೋಟೆಲ್ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು.
— ಲಲಿತಾ ಬಿರಿಯಾನಿ ತಿಂದು ಅಸ್ವಸ್ಥಗೊಂಡ ಮಹಿಳೆ
ಅಧಿಕಾರಿಗಳ ಪರಿಶೀಲನೆ ವೇಳೆ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಾವಳಿ ಕೇಳಿದಾಗ, ಕ್ಯಾಮರಾ ಒಂದು ವಾರದಿಂದ ಕೆಟ್ಟು ಹೋಗಿದ್ದು, ರಿಪೇರಿಗೆ ನೀಡಲಾಗಿದೆ ಎಂದಿರುವ ಮಾಲೀಕನ ಮಾತುಗಳಿಂದ ಪ್ರಕರಣ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿವೆ.
ಪೌರಾಯುಕ್ತ ಸತ್ಯಪ್ರಕಾಶ್, ಸಿಪಿಐ ರವಿಕುಮಾರ್, ಪುರಸಭೆ ಸಿಬ್ಬಂದಿ ಪರಿಶೀಲನೆ ನಡೆಸಿದರು.