ಆನೇಕಲ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಶೇಖರ, ಗ್ರಂಥಪಾಲಕಿ ಎಂ.ಕೋಕಿಲಾ, ಸಿಬ್ಬಂದಿ ಡಾ.ಕೆ.ವಿ.ಲತಾ, ಕೆ.ವಿ.ನೇತ್ರಾವತಿ, ಡಿ.ಮಂಜುಶ್ರೀ ಇದ್ದರು.
ಆನೇಕಲ್: ಕನಕದಾಸರ ಜೀವನ, ಕೀರ್ತನೆಗಳು ಮಾನವೀಯ ಸಂದೇಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್.ಅರವಿಂದ್ ಹೇಳಿದರು.
ಪಟ್ಟಣದ ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯ ದೂರ ಮಾಡಿಕೊಂಡು ಜೀವಿಸಬೇಕು ಎಂಬ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಕೊಳ್ಳಬೇಕು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ವಿ.ರಾಮಕೃಷ್ಣಪ್ಪ ಮಾತನಾಡಿ, ರಾಜ್ಯೋತ್ಸವದ ಮಹತ್ವ, ನಾಡು-ನುಡಿಯ ಗೌರವ ಹಾಗೂ ಹೊಣೆಗಾರಿಕೆ ಬಗ್ಗೆ ತಿಳಿಸಿದರು. ಕಾಲೇಜಿನ "ಅರಳಿ ಕಟ್ಟೆ' ರಂಗಕಲಾ ತಂಡದ ವಿದ್ಯಾರ್ಥಿಗಳು " ಕರ್ನಾಟಕ ರಾಜ್ಯೋತ್ಸವ ' ವಿಷಯದ ಮೇಲೆ ನಾಟಕ ಪ್ರದರ್ಶಿಸಿದರು.
ನಾಟಕವು ರಾಜ್ಯವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡುವತ್ತ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಂದರು. ಕಚೇರಿ ಸಿಬ್ಬಂದಿ ಎಂ.ಲೋಕೇಶ, ವಕೀಲ ಪುರುಷೋತಮ್ ಇತರರು ಇದ್ದರು.