ಬೆಂಗಳೂರು : ಜಗತ್ತಿನೆಲ್ಲೆಡೆ ಹಿಂಸೆ, ಕ್ರೌರ್ಯ, ದ್ವೇಷ, ಅಸೂಯೆ, ಸೇಡು ಯುದ್ಧ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಅವುಗಳನ್ನು ನಿವಾರಿಸಿ ಪರಸ್ಪರ ಸ್ನೇಹಮಯವಾಗಿ ಬದುಕಲು ಕಲೆ, ಸಾಹಿತ್ಯ, ಸಂಗೀತದ ಅವಶ್ಯಕತೆ ಇದೆ ಎಂದು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ವಾಧಿಕಾರಿ ರಾಜಕಾರಣಿಗಳಿಂದ, ಆಡಳಿತಗಾರರಿಂದ ಜಾಗತಿಕ ಶಾಂತಿ ನಾಶವಾಗುತ್ತಿದೆ. ಕಲೆಯ ಪೋಷಣೆ, ಸಂಸ್ಕೃತಿಯ ಸಂವರ್ಧನೆಯಾದಾಗ ಸಮಾಜದಲ್ಲಿ ಶಾಂತಿ ಸ್ಥಾಪನೆ ಯಾಗುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗಲು ಸಹಕಾರಿಯಾಗುತ್ತದೆ. ಕಲೆ, ನೃತ್ಯ, ಸಂಗೀತದ ವಾತಾವರಣದಲ್ಲಿ ಪಾಲ್ಗೊಂಡಾಗ ಮಾನವನ ಅಂತಃಕರಣ ಜಾಗೃತಗೊಳ್ಳುತ್ತದೆ, ಜಾತಿ ಧರ್ಮಗಳ ಎಲ್ಲೆ ಮೀರಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ. ಕಲೆ, ಸಾಹಿತ್ಯ, ಸಂಗೀತದ ಎಲ್ಲ ಪ್ರಕಾರಗಳಲ್ಲಿ ಸಾಧನೆ ಮಾಡುವ ಮೂಲಕ ರಾಜ್ಯ, ದೇಶದ ಐಕ್ಯತೆಗೆ ಕೊಡುಗೆ ನೀಡುತ್ತಿರುವ ಕಲಾವಿದರ ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದ್ದು, ಕಲೆ ಸಾಹಿತ್ಯ ಸಂಸ್ಕೃತಿಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರೊ.ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಾಡಿನ ಕಲೆ ಸಾಹಿತ್ಯ ಸಂಗೀತದ ಹಿರಿಮೆಯನ್ನು ಸಾರುವ ಗೀತ ಚಿತ್ರ ವಿಡಿಯೋವನ್ನು ಹಿರಿಯ ರಂಗಕರ್ಮಿ ಡಾ. ಶ್ರೀನಿವಾಸ ಜಿ.ಕಪ್ಪಣ್ಣ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಕಲೆ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಉತ್ಸವ, ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿ ನಾಡಿನ ಸಂಸ್ಕೃತಿಯ ಅಸ್ಮಿತೆಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ, ಇತ್ತೀಚಿನ ವರ್ಷಗಳಲ್ಲಿ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರಗಳು ನಿರಾಸಕ್ತಿ ತೋರುತ್ತಿವೆ ಎಂದು ಅಸಮಾಧಾನ ಹೊರಹಾಕಿದರು. ಕಲಾವಿದರ ಕಲಾ ಪ್ರದರ್ಶನವನ್ನು ರಾಜ್ಯಕ್ಕೆ ಮಾತ್ರಸೀಮಿತಗೊಳಿಸುತ್ತಿರುವುದು ಕಲಾವಿದರ ಪ್ರತಿಭೆಗೆ ಮನ್ನಣೆ ಇಲ್ಲದಂತಾಗಿದೆ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಒದಗಿಸಬೇಕೆಂದು ಕಪ್ಪಣ್ಣ ಸರ್ಕಾರಕ್ಕೆ ಮನವಿ ಮಾಡಿದರು.
ಹಿಂದುಸ್ತಾನಿ ಸಂಗೀತ, ನೃತ್ಯ, ಕರ್ನಾಟಕ ಸಂಗೀತ, ಸುಗಮ ಸಂಗೀತ, ಕಥಾ ಕೀರ್ತನ, ಗಮಕ, ವಾದ್ಯ ತಯಾರಿಕೆ ಹಾಗೂ ಸಂಘ ಸಂಸ್ಥೆಗೆ ಸೇರಿದಂತೆ ಒಟ್ಟು 18 ಜನರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ.ವಸುಂದರಾ, ಕನ್ನಡ ಮತ್ತು ಸಂಸ್ಕೃತಿ ಸಚಿವರ ವಿಶೇಷಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಎಸ್.ರಶ್ಮಿಮತ್ತಿತರರು ಉಪಸ್ಥಿತರಿದ್ದರು.
ನಾಡಿನಲ್ಲಿ ಇನ್ನೂ ಅನೇಕ ಕಲಾವಿದರು ಪ್ರಶಸ್ತಿ ಗಳಿಂದ ವಂಚಿತರಾಗಿದ್ದಾರೆ, ಅವರೆಲ್ಲರಿಗೂ ಪ್ರಶಸ್ತಿ ನೀಡಲು ಸರ್ಕಾರ ಹೆಚ್ಚಿನ ಅನುದಾನ ನೀಡಿ ಕಲೆಯನ್ನ ಮತ್ತು ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ.ಶುಭ ಧನಂಜಯ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಅಧ್ಯಕ್ಷೆ