ಮುಧೋಳ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರದಲ್ಲಿ ಕೇಂದ್ರ, ಜಿಲ್ಲಾ , ತಾಲೂಕು ಘಟಕಗಳ ಆಶ್ರಯದಲ್ಲಿ ಜರುಗಿದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿಗಳಿಗೆ ದತ್ತಿ ಪ್ರಶಸ್ತಿ ನೀಡಲಾಯಿತು. ಡಾ. ಕೆ.ಎಲ್. ಉದುಪುಡಿ, ನ್ಯಾಯವಾದಿ ಪ್ರಕಾಶ ವಸದ, ಪತ್ರಕರ್ತ ದ.ರಾ. ಪುರೋಹಿತ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಸಿ.ಎಸ್. ನಾಗನೂರ ಇತರರಿದ್ದರು. 
ರಾಜ್ಯ

ಸಾಹಿತಿಗಳಿಗೆ ಸಮಕಾಲಿನ ಜ್ಞಾನದ ಅರಿವು ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಡಾ. ಬಾಳಾಸಾಹೇಬ ಲೋಕಾಪೂರ ಅಭಿಮತ
  • ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
ಮುಧೋಳ: ಸಾಹಿತ್ಯ ಸೃಷ್ಟಿಯತ್ತ ಪ್ರತಿಯೊಬ್ಬರೂ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತಿಗಳು ಕೇವಲ ಪ್ರಶಸ್ತಿಗಳ ಬೆನ್ನು ಹತ್ತದೆ, ಸಮಾಜದಲ್ಲಿ ಜನ ಓದಲು ಇಷ್ಟಪಡುವಂತ ಮೌಲ್ಯಯುತ ಕೃತಿಗಳನ್ನು ರಚಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಬಾಳಾಸಾಹೇಬ ಲೋಕಾಪುರ ಕರೆ ನೀಡಿದರು.
ತಾಲೂಕಿನ ಜೀರಗಾಳ ಗ್ರಾಮದ ಡಾ. ಶಿವಾನಂದ ಕುಬಸದ ಅವರ ‘ಪರ್ಣಕುಟಿ’ ಹೊರಾವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ, ಜಿಲ್ಲಾ, ತಾಲೂಕು ಘಟಕಗಳ ಆಶ್ರಯದಲ್ಲಿ ಜರುಗಿದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ-2025 ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ನಮ್ಮೆಲ್ಲರ ಮೇಲೆಯೂ ದೊಡ್ಡ ಜವಾಬ್ದಾರಿಯಿದೆ. ಸಾಹಿತಿಗಳು ಸಮಕಾಲೀನ ಜ್ಞಾನ ಮತ್ತು ಅರಿವು ಹೊಂದಿರಬೇಕು. ಕಾವ್ಯ ರಚನೆ ಕಷ್ಟದ ಕೆಲಸ, ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿಗಳೇ ಅರಸಿ ಬರಬೇಕು ಎಂದು ಅವರು ಸಲಹೆ ನೀಡಿದರು.
ಚಿಂತನಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಇತಿಹಾಸ ಹೊಂದಿದ್ದು, ಕನ್ನಡ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಲೇಖಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ದತ್ತಿ ದಾನಿಗಳ ಆಶಯದಂತೆ ಹಿರಿಯರ ಮಾರ್ಗದರ್ಶನದಲ್ಲಿ ಪರಿಷತ್ತು ಲೇಖಕರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಈವರೆಗೆ ಸುಮಾರು 150ಕ್ಕೂ ಹೆಚ್ಚು ಲೇಖಕರಿಗೆ ದತ್ತಿ ಪ್ರಶಸ್ತಿ ನೀಡಲಾಗಿದ್ದು, ಹೊಸ ದತ್ತಿಗಳನ್ನು ಸಂಗ್ರಹಿಸುವ ಕಾರ್ಯವೂ ಮುಂದುವರಿದಿದೆ ಎಂದು ತಿಳಿಸಿದರು.
ಕಸಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ ಮಾತನಾಡಿ, ಪ್ರಶಸ್ತಿಗಳ ಬೆನ್ನು ಹತ್ತದೆ ಉತ್ಕೃಷ್ಟ ಸಾಹಿತ್ಯ ಕೃಷಿ ಮಾಡಿದ್ದೇಯಾದರೆ ಪ್ರಶಸ್ತಿಗಳೇ ತಮ್ನನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು. ತೋಟಗಾರಿಕೆ ವಿವಿ ಹಣಕಾಸು ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅಭಿನಂದನಾ ನುಡಿಗಳನ್ನಾಡಿದರು.
ಯುಪಿಎಸ್‌ಸಿ ಅಧೀನದ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 114ನೇ ರ‌್ಯಾಂಕ್ ಪಡೆದ ಸಂಜಯ ಬಗಲಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನ್ನವರ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪುರವಾರ, ತುಕಾರಾಮ ಲಮಾಣಿ ಅವರನ್ನು ಗೌರವಿಸಲಾಯಿತು.
ದಿ. ಸತ್ಯಪ್ಪ ಪೂಜಾರಿ ಮತ್ತು ದಿ. ಗೋವಿಂದಪ್ಪ ತಿಮ್ಮಪ್ಪ ಸುರಮಂಜಿ ಅವರ ಸ್ಮರಣಾರ್ಥ ತಲಾ 25 ಸಾವಿರ ರೂ.ಗಳ ನೂತನ ದತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಥಾಪಿಸಲಾಯಿತು.
ರನ್ನ ಪ್ರತಿಷ್ಠಾನದ ಡಾ. ಕೆ.ಎಲ್. ಉದುಪುಡಿ, ನ್ಯಾಯವಾದಿ ಪ್ರಕಾಶ ವಸದ, ಪತ್ರಕರ್ತ ದ.ರಾ. ಪುರೋಹಿತ, ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಸಿ.ಎಸ್. ನಾಗನೂರ ಇತರರಿದ್ದರು.
"

ಪ್ರಶಸ್ತಿ ಪ್ರದಾನ

ವಿಜಯಪುರ ಜಿಲ್ಲಾ ಏಳನೇ ಕಸಾಪ ಸಮ್ಮೇಳನ, ಬಾಗಲಕೋಟೆ ಜಿಲ್ಲಾ ಪ್ರಥಮ ಸಮ್ಮೇಳನ, ಬೀಳಗಿ ತಾಲೂಕು ಪ್ರಥಮ ಸಮ್ಮೇಳನ ಹಾಗೂ ಪ್ರಮೋದ-ಸೌಜನ್ಯ ತೆಗ್ಗಿ ದತ್ತಿ ಪ್ರಶಸ್ತಿಗಳನ್ನು ಒಟ್ಟು 16ಕ್ಕೂ ಹೆಚ್ಚು ಸಾಹಿತಿಗಳಿಗೆ ಪ್ರದಾನ ಮಾಡಲಾಯಿತು. ಡಾ.ಪ್ರಕಾಶ ಖಾಡೆ, ಡಾ. ಆರ್. ನಾಗರಾಜು, ಎಂ.ಡಿ. ಚಿತ್ತರಗಿ ಸೇರಿ ಹಲವು ಸಾಹಿತಿಗಳು ಪ್ರಶಸ್ತಿ ಸ್ವೀಕರಿಸಿದರು.