ಬಸ್‌ನಲ್ಲಿಯೇ ಕವಿಗೋಷ್ಠಿ 
ರಾಜ್ಯ

ನಗರ ಸಾರಿಗೆ ಬಸ್ಸಿನಲ್ಲಿ ಸಾಹಿತ್ಯ ಪ್ರಯಾಣ -Literary

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಮೊದಲ ಬಾರಿಗೆ ಚಲಿಸುತ್ತಿರುವ ಬಿಎಂಟಿಸಿ ಬಸ್‌ನಲ್ಲಿಯೇ ಕವಿಗೋಷ್ಠಿಯನ್ನು ನಡೆಸಿ ನೋಡುಗರ ಗಮನ ಸೆಳೆದಿದೆ.
ಚಿಕ್ಕಬಾಣಾವರದ ಸಂತೇಬೀದಿಯ ಬಸ್ ನಿಲ್ದಾಣದಲ್ಲಿ ಕವಿಗೋಷ್ಠಿ ನಡೆಯುವ ಬಸ್‌ಗೆ ಚಾಲನೆ ನೀಡಲಾಯಿತು.
ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್, ಯಶವಂತಪುರ, ಮಲ್ಲೇಶ್ವರ, ನವರಂಗ, ನಂದಿನಿ ಬಡಾವಣೆ, ಹೆಗ್ಗನಹಳ್ಳಿ ಕ್ರಾಸ್, ರಾಜಗೋಪಾಲನಗರದಲ್ಲಿ ಸಂಚರಿಸಿದ ಬಸ್, ಚಿಕ್ಕಬಾಣಾವರಕ್ಕೆ ಮರಳಿತು. ವಿ.ಟಿ.ರಾಮಕೃಷ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 25ಕ್ಕೂ ಅಧಿಕ ಕವಿಗಳು ಕವನ ವಾಚಿಸಿದರು. ಪ್ರಯಾಣಿಕರು ಕವಿತೆ ಆಲಿಸಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮಾತನಾಡಿ, ಕಸಾಪ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಂಟಿಸಿ ಬಸ್‌ನಲ್ಲಿ ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಪ್ರತಿನಿತ್ಯ ಬಸ್ಸಿನ ಚಕ್ರಗಳ ಮೇಲೆ ಜೀವನ ಚಕ್ರ ಸಾಗಿಸುವ ಸಾರ್ವಜನಿಕರ ಮಧ್ಯೆ ಕನ್ನಡದ ಕವಿಗಳಿಂದ ಕವಿತೆಗಳನ್ನು ಓದಿಸುವ ಮೂಲಕ ಸಾರ್ವಜನಿಕರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದು ಹೇಳಿದರು.
ಕಸಾಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಲಿಂಗರಾಜು ಎ. ಕಾಳೇನಹಳ್ಳಿ ಮೇಷ್ಟ್ರು ಮತ್ತಿತರರಿದ್ದರು.