ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೊಂಬೆ ನಾಡಿನ ಬೆಳಕು ಪುಸ್ತಕವನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆ ಮಾಡಿದರು. ಲತಾ ಹಂಸಲೇಖ, ಇಂದಿರಾ ಕೃಷ್ಣಪ್ಪ, ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ. ಕಾಳೇಗೌಡ ನಾಗವಾರ, ಡಾ. ಅಪ್ಪಗೆರೆ ತಿಮ್ಮರಾಜು, ರವೀಂದ್ರ ಸಿರವರ, ಧನಂಜಯ, ರಾಜೇಶ್ ರಾಂಪುರ ಇತರರು ಇದ್ದರು.  
ರಾಜ್ಯ

ಸಾಹಿತ್ಯ ಪ್ರಜ್ಞೆ ಕರ್ನಾಟಕ್ಕೆ ವಿಶೇಷ ಶಕ್ತಿ

ಚನ್ನಪಟ್ಟಣ :

ಸಂಸ್ಥೆಗಳು ಹುಟ್ಟುವುದು ವಿಶೇಷವಲ್ಲ. ಅವು ನೀಡುವ ಸೇವೆ ವಿಶೇಷ ಎಂದು ನಾದಬ್ರಹ್ಮ ಹಂಸಲೇಖ ತಿಳಿಸಿದರು.

ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅನನ್ಯ ಸಂಸ್ಥೆಯ ದಶಮಾನೋತ್ಸವದ ಸಂಭ್ರಮ ಹಾಗೂ ಬೊಂಬೆ ನಾಡಿನ ಬೆಳಕು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅನನ್ಯ ಸಂಸ್ಥೆಯು ಇನ್ನಷ್ಟು ಬೆಳೆಯಲಿ.
ಕಳೆದ ಹತ್ತು ವರ್ಷಗಳಿಂದ ಮಕ್ಕಳಿಗೆ ದೇಸಿ ಕಲೆ ಮತ್ತು ಬೆಳ್ಳಿತೆರೆ ಹಾಗೂ ಮಾಧ್ಯಮ ತರಬೇತಿ ನೀಡುತ್ತಾ ಬಂದಿರುವ ಅನನ್ಯ ಸಂಸ್ಥೆ ಹಲವು ಮಕ್ಕಳಿಗೆ ತರಬೇತಿ ನೀಡಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ, ಸಿನಿಮಾ ಕ್ಷೇತ್ರ ಹಾಗೂ ವಿವಿಧ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಸಾಹಿತ್ಯ ಮತ್ತು ಕನ್ನಡ ಪ್ರಜ್ಞೆ ಕರ್ನಾಟಕ್ಕೆ ವಿಶೇಷ ಶಕ್ತಿ. ಎಲ್ಲ ಕಾಲದಲ್ಲೂ ಕನ್ನಡ ಪ್ರಜ್ಞೆ ಬೆಳೆದುಬಂದಿದೆ. ದಾಸೋಹ ಪ್ರಜ್ಞೆಯಲ್ಲಿದ್ದ ನಮ್ಮ ಮಠಗಳನ್ನು ರಾಜಕಾರಣಿಗಳು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.

ಶಿಕ್ಷಣ ತಜ್ಞ ಡಾ. ನಿರಂಜನ್ ಆರಾಧ್ಯ ಮಾತನಾಡಿ, ತಾಯಿಭಾಷೆ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಕನ್ನಡ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ತಾಯಿ ಹಾಗೂ ಭಾಷೆ ಎರಡು ಒಂದೇ. ಯಾರು ಇವೆರಡನ್ನು ನಿರ್ಲಕ್ಷಿಸಬೇಡಿ ಎಂದರು.
ಚಿಂತಕ ಡಿ. ಶಿವಶಂಕರ್ ಮಾತನಾಡಿ, ಚಳವಳಿಗಳು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗದೆ ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆ ಕಾಪಾಡುವ ಚಳವಳಿಗಳಾಗಬೇಕು ಎಂದರು.
ಗೀತರಚನಕಾರ ಕವಿರಾಜ್ ಮಾತನಾಡಿ, ಕನ್ನಡ ಸಿನಿಮಾ ಹಾಗೂ ಭಾಷೆ ಪ್ರೀತಿಸಿ, ಗೌರವಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮವು ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿತು.
ಕನ್ನಡ ಬಾವುಟಗಳು ಹಾಗೂ ಕನ್ನಡ ಶಾಲುಗಳಿಂದ ಅಲಂಕರಿಸಲ್ಪಟ್ಟ ಸಭಾಂಗಣದಲ್ಲಿ ಅಪಾರ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಕನ್ನಡದ ಅಸ್ಮಿತೆ, ಭಾಷಾ ಪ್ರಜ್ಞೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
10 ಸಿಪಿಟಿ 001