ಸೋಮವಾರಪೇಟೆಯ ಜ್ಞಾನ ವಿಕಾಸ ಶಾಲೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ವಕೀಲೆ ಎಚ್.ಆರ್.ಪವಿತ್ರಾ ಉದ್ಘಾಟಿಸಿದರು. ಎಂ.ಜೆ.ಅಣ್ಣಮ್ಮ, ಲತಾ ಮಂಜು, ನಿತಾ ಜಯರಾಂ, ಖಜಾಂಚಿ ಲತಾ ನಾಗೇಶ್, ರಾಜೇಶ್ವರಿ, ನಂದಿತಾ, ದಿವ್ಯಾ ದಿವಾಕರ್ ಇದ್ದರು.
- ವಕೀಲೆ ಎಚ್.ಆರ್.ಪವಿತ್ರಾ
- ಜ್ಞಾನ ವಿಕಾಸ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ
ಸೋಮವಾರಪೇಟೆ: ಸಾಕ್ಷರತೆ ಎಂದರೆ ಕೇವಲ ಸಹಿ ಹಾಕುವುದು, ಓದಲು ಮತ್ತು ಬರೆಯಲು ಕಲಿಯುವುದಷ್ಟೇ ಅಲ್ಲ. ಅದು ನಮ್ಮ ಚಿಂತನೆಯನ್ನು ವಿಸ್ತರಿಸಿ, ಬದುಕನ್ನು ರೂಪಿಸಿಕೊಳ್ಳುವುದರ ಜತೆಗೆ ಸಮಾಜವನ್ನು ಅರ್ಥಮಾಡಿಕೊಳ್ಳಲು ದಾರಿ ಮಾಡಿಕೊಡುತ್ತದೆ ಎಂದು ವಕೀಲೆ ಎಚ್.ಆರ್.ಪವಿತ್ರಾ ಹೇಳಿದರು.
ಇಲ್ಲಿನ ಜ್ಞಾನ ವಿಕಾಸ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಗೋಲ್ಡ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುನೆಸ್ಕೋ ಆಶಯದಂತೆ ಸಾಕ್ಷರತೆ, ಗ್ರಹ ಮತ್ತು ಸಮೃದ್ಧಿಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸಾಕ್ಷರತಾ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ದೊರೆತಾಗ ಮಾತ್ರ ಭೂಮಿಯ ರಕ್ಷಣೆ ಹಾಗೂ ದೇಶದ ಸಮೃದ್ಧಿ ಸಾಧ್ಯ ಎಂದರು.
ಶಿಕ್ಷಣ ಮನುಷ್ಯನನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಶಕ್ತಿಯಾಗಿದೆ. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಹುಲಿಯ ಹಾಲಿನಂತಿದ್ದು, ಅದನ್ನು ಕುಡಿದವನು ಘರ್ಜಿಸುತ್ತಾನೆ. ಆದ್ದರಿಂದ ಅಕ್ಷರ ಜ್ಞಾನವೇ ನಿಜವಾದ ಸಂಪತ್ತು ಎಂದರು.
ಶಾಲೆ ಮುಖ್ಯ ಶಿಕ್ಷಕ ಎಂ.ಜೆ.ಅಣ್ಣಮ್ಮ ಮಾತನಾಡಿ, ಅಕ್ಷರ ಕಲಿತವನಿಗೆ ಎಂದಿಗೂ ಸೋಲಿಲ್ಲ. ಬುದ್ಧಿವಂತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಭರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಹಾಗೂ ವಿಶೇಷ ಗಮನದ ಅಗತ್ಯವಿರುವ ಮಕ್ಕಳನ್ನು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಮಕ್ಕಳನ್ನು ಮೊದಲು ಗುರುತಿಸಿ, ಅವರಲ್ಲಿ ಕಲಿಕೆಯ ಆಸಕ್ತಿ ಮೂಡಿಸಬೇಕು. ಆಗ ಮಾತ್ರ ಸಾಕ್ಷರತಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಕ್ಲಬ್ ಅಧ್ಯಕ್ಷೆ ಲತಾ ಮಂಜು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಸಹ ಶಿಕ್ಷಕಿ ಬಿ.ಡಿ.ಪ್ರಮೀಳಾ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಕವಿತಾ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಣದ ಮಹತ್ವ ಸಾರುವ ಜಾಗೃತಿ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕ್ಲಬ್ ವತಿಯಿಂದ ಜ್ಯಾಮಿಟ್ರಿ ಬಾಕ್ಸ್, ರೈಟಿಂಗ್ ಬೋರ್ಡ್ ಹಾಗೂ ಸಿಹಿ ವಿತರಿಸಲಾಯಿತು. ಕ್ಲಬ್ ಕಾರ್ಯದರ್ಶಿ ವನಿತಾ ಜಯರಾಂ, ಖಜಾಂಚಿ ಲತಾ ನಾಗೇಶ್, ರಾಜೇಶ್ವರಿ, ನಂದಿತಾ, ದಿವ್ಯಾ ದಿವಾಕರ್ ಮತ್ತಿತರರು ಇದ್ದರು.