ಮಹಾಲಿಂಗಪುರದಲ್ಲಿ ರನ್ನ ವಿಚಾರ ವೇದಿಕೆ ಆಯೋಜಿಸಿದ್ದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರೊಂದಿಗೆ ವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ, ಉಪಾಧ್ಯಕ್ಷ ಬಸವರಾಜ ಮೇಟಿ, ಜಿ.ಎಸ್.ಗೊಂಬಿ ಇತರರಿದ್ದರು. 
ರಾಜ್ಯ

ಮಾನಸಿಕ ನೆಮ್ಮದಿಗೆ ಸಂಗೀತ ಆಲಿಕೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ರನ್ನ ವಿಚಾರ ವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಅಭಿಮತ
  • ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ
ಮಹಾಲಿಂಗಪುರ: ಸಂಗೀತ ಕೇವಲ ಮನರಂಜನೆ ಮಾಧ್ಯಮವಲ್ಲ ಶಾಂತಿಯುತ ಹಾಡುಗಳನ್ನು ಕೇಳುವುದರಿಂದ ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಿ ಮನಸ್ಸನ್ನು ಪ್ರಶಾಂತವಾಗಿಡುತ್ತದೆ ಎಂದು ರನ್ನ ವಿಚಾರ ವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಹೇಳಿದರು.
ಪಟ್ಟಣದ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ರನ್ನ ವಿಚಾರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಕರ್ಣ ಮಾಧುರ್ಯವಾಗಿರಬೇಕು. ಸಂಗೀತ ಮಾನಸಿಕ ಪ್ರಸನ್ನತೆ ನೀಡಿ ರಕ್ತದೊತ್ತಡ ಕಡಿಮೆ ಮಾಡಿ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆ ಸಂಚಾಲಕ ಮ.ಕೃ. ಮೇಗಾಡಿ ಮಾತನಾಡಿ, ಮೇಲು-ಕೀಳು, ಜಾತಿ-ಮತ ಎಂಬ ಭೇದವಿಲ್ಲದ ಕಲೆ ಸಂಗೀತ. ಕಿವಿಯೊಳಗೆ ಹಾದು ನರನಾಡಿಗಳಲ್ಲಿ ಪ್ರವೇಶಿಸಿ ಮನಸ್ಸಿನ ಬೇಸರ ಸಂಕಟ ನಿವಾರಿಸಿ ಹೊಸ ಚೈತನ್ಯ ತುಂಬುತ್ತದೆ, ಸಂಗೀತ ಕಲೆ ದೇವತೆಗಳ ಭಾಷೆ ಎಂದರು.
ಬೆಂಗಳೂರಿನ ಸಂಗೀತ ಕಲಾವಿದ ರಕ್ಷಿತ್ ಕುಲಕರ್ಣಿ, ವಿನಾಯಕ ಇನಾಮದಾರ ಹಾಗೂ ಶ್ರೇಯಶ್ರೀ ಇನಾಮದಾರ ಶಾಸೀಯ ಸಂಗೀತ ಗಾಯನ, ಭಾವಗೀತೆ, ಭಕ್ತಿಗೀತೆ ವಚನ ಗಾಯನ ಜನಮನಸೂರೆಗೊಂಡವು. ವಿಜಯಪುರದ ವಿನಯ ಕುಲಕರ್ಣಿ ತಬಲಾ ವಾದನ ಹಾಗೂ ಇಚಲಕರಂಜಿ ತ್ರಿಗುಣ ಪೂಜಾರಿ ಹಾರ‌್ಮೋನಿಯಂ ವಾದನ ಸಂಗೀತಕ್ಕೆ ಮೆರಗು ನೀಡಿದವು.
ರನ್ನ ವಿಚಾರ ವೇದಿಕೆ ಉಪಾಧ್ಯಕ್ಷ ಬಸವರಾಜ ಮೇಟಿ, ಮಾಧ್ಯಮ ಕಾರ್ಯದರ್ಶಿ ಎಸ್.ಎಸ್. ಈಶ್ವರಪ್ಪಗೋಳ, ಕೋಶಾಧ್ಯಕ್ಷ ಈರಣ್ಣ ಹಲಗತ್ತಿ, ಸಲಹಾ ಸಮಿತಿ ಸದಸ್ಯರಾದ ಜಿ.ಎಸ್. ಗೊಂಬಿ, ಅಣ್ಣಾಜಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಗುರುಲಿಂಗ ಅಮ್ಮಣಗಿ,ದಾಕ್ಷಾಯಣಿ ಮಂಡಿ, ಅಕ್ಕೂತಾಯಿ ಕಿಚಡಿ, ಶಕುಂತಲಾ ತೇರದಾಳ ಇತರರಿದ್ದರು.