ವಿಜಯಪುರ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಅವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಬಿ. ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ ಇತರರಿದ್ದಾರೆ.
- ಹೋರಾಟಗಾರರಿಂದ ಮನವಿ
- ಜಿಲ್ಲಾಸ್ಪತ್ರೆಯಲ್ಲಿ ತೀವ್ರ ಅವ್ಯವಸ್ಥೆ ಸೌಕರ್ಯಗಳ ಕೊರತೆ
ವಿಜಯಪುರ: ಕಾಯಕಲ್ಪ ವಿಜೇತ ಸರ್ಕಾರಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆ ಲಭಿಸದೇ ರೋಗಿಗಳು ಬಳಲುತ್ತಿದ್ದಾರೆ. ಹೀಗಾಗಿ ಕೂಡಲೇ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಆಗ್ರಹಿಸಿ ಮಂಗಳವಾರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಲ ಕಾಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದ ಪದಾಧಿಕಾರಿಗಳು ಬಳಿಕ ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ಅವ್ಯವಸ್ಥೆಯಿಂದ ರೋಗಿಗಳು ಬಳಲುತ್ತಿದ್ದಾರೆ. ಪ್ರತಿದಿನ
2,000 ರಿಂದ 3,000ಕ್ಕೂ ಹೆಚ್ಚು ಹೊರ ರೋಗಿಗಳು ಇಂಡಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕುಗಳಿಂದ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಜತ್ತ ಜಿಲ್ಲೆಗಳಿಂದಲೂ ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕನಿಷ್ಠ ಮೂಲ ವ್ಯವಸ್ಥೆಯನ್ನೂ ಕಲ್ಪಿಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
"
ಸೌಲಭ್ಯಗಳು ಮರೀಚಿಕೆ
ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್, ಸೂಪರ್ ಸ್ಪೆಷಾಲಿಟಿ ಕಟ್ಟಡ, ಪಂಚಕರ್ಮ ಚಿಕಿತ್ಸಾಲಯ, 670 ಹಾಸಿಗೆಗಳ ಜನರಲ್ ಆಸ್ಪತ್ರೆ, 150 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ, 60 ಹಾಸಿಗೆಗಳ ಟ್ರಾಮಾ ಸೆಂಟರ್, ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್ ಹಾಗೂ ಹೈಟೆಕ್ ಶವಾಗಾರಗಳಂತಹ ಅತ್ಯಾಧುನಿಕ ಸೌಲಭ್ಯಗಳಿದ್ದರೂ, ರೋಗಿಗಳಿಗೆ ಚೀಟಿ ಪಡೆಯುವಲ್ಲಿ ತೀವ್ರ ತೊಂದರೆಯಾಗುತ್ತಿದೆ.
ಬೆಳಗ್ಗೆ 8ರಿಂದಲೇ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತರೂ ಮಧ್ಯಾಹ್ನದ ತನಕ ಚಿಕಿತ್ಸೆ ಲಭಿಸುತ್ತಿಲ್ಲ. ಹೀಗಾಗಿ ಚಿಕಿತ್ಸೆಯಿಂದ ವಂಚಿತಗೊಂಡು ಮರಳಿ ಗ್ರಾಮಕ್ಕೆ ನಿರ್ಗಮಿಸುತ್ತಿದ್ದಾರೆಂದು ದೂರಿದರು.
ದೂರದ ಜಮಖಂಡಿ, ಕುಂಟೋಜಿ, ಕಲಕೇರಿ, ಸಾಂಗ್ಲಿ ಮತ್ತು ಜತ್ತದಿಂದ ಬಂದ ವಯಸ್ಸಾದವರು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಮತ್ತು ಮಕ್ಕಳು ಬಿಸಿಲಿನಲ್ಲಿ ನಿಂತು ಪರಿತಪಿಸುತ್ತಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾಕಷ್ಟು ಜಾಗ ಇದ್ದರೂ ಕೌಂಟರ್‌ಗಳನ್ನು ಮುಚ್ಚಿ ಎಲ್ಲ ರೋಗಿಗಳನ್ನು ಒಂದೇ ಕಡೆಗೆ ನೂಕುವುದರಿಂದ ನೂಕುನುಗ್ಗಲು ಹೆಚ್ಚಾಗಿ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಪರಿಹರಿಸಿ ಎಂದರು.
ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಸದಸ್ಯರಾದ ಬಿ. ಭಗವಾನ್ ರೆಡ್ಡಿ, ಅರವಿಂದ
ಕುಲಕರ್ಣಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಬಾಬುರಾವ ಬೀರಕಬ್ಬಿ, ಸುರೇಶ ಬಿಜಾಪುರ,
ಸಿದ್ಧಲಿಂಗ ಬಾಗೇವಾಡಿ, ಭರತ ಕುಮಾರ ಎಚ್.ಟಿ, ಮಲ್ಲಿಕಾರ್ಜುನ ಎಚ್.ಟಿ, ಗೀತಾ ಎಚ್,
ನೀಲಂಬಿಕಾ ಬಿರಾದಾರ, ಲಿಂಗರಾಜ ಬಿದರಕುಂದಿ, ಸಂತೋಷ ನಾಯಕ, ಭೀಮು ಉಪ್ಪಾರ,
ಜಗದೇವ ಸೂರ್ಯವಂಶಿ, ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ, ಭಾಗ್ಯ ಮಿಣಜಗಿ, ಸಲಿಂ
ಹೊಕ್ಕರಣಿ, ಭೋಗೇಶ ಸೋಲಾಪುರ ಇತರರಿದ್ದರು.
|
| ಪ್ರಮುಖ ಬೇಡಿಕೆಗಳು |
|---|
ಕೂಡಲೇ ಅಗತ್ಯಕ್ಕೆ ತಕ್ಕಷ್ಟು ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವುದು. |
ಎಲ್ಲ ರೋಗಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಆಸ್ಪತ್ರೆಯಲ್ಲೇ ಮಾಡುವ ವ್ಯವಸ್ಥೆ ಕಲ್ಪಿಸುವುದು. |
ಎಲ್ಲ ಅಗತ್ಯ ಔಷಧಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವುದು. |
ಚೀಟಿ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ರೋಗಿಗಳಿಗೆ ನೆರಳು, ಕುರ್ಚಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. |
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಪ್ರತ್ಯೇಕ ಕೌಂಟರ್‌ಗಳನ್ನು ತಕ್ಷಣ ತೆರೆಯುವುದು. |
ಯಾವುದೇ ಪಾರ್ಕಿಂಗ್ ದರ ಇರಕೂಡದು ಹಾಗೂ ಅದನ್ನು ಸಂಪೂರ್ಣ ರದ್ದು ಮಾಡಬೇಕು. |