ವಿಧಾನಸೌಧ 
ರಾಜ್ಯ

ಖಾಲಿ ಕುಳಿತ ಅಧಿಕಾರಿ, ಸಿಬ್ಬಂದಿ ಪಟ್ಟಿ ಕೊಡಿ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ವರ್ಗಾವಣೆ ಆದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿತ ಸ್ಥಳಕ್ಕೆ ಹಾಜರಾಗದೆ ಕಾಲಕಳೆಯುತ್ತಿರುವುದಕ್ಕೆ ಲೋಕಾಯುಕ್ತ ಗರಂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳ ನಿರೀಕ್ಷೆಯಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವಿವರವನ್ನು ತಕ್ಷಣ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಟ್ಟಾಜ್ಞೆ ಮಾಡಿದ್ದಾರೆ.
ಪ್ರತಿ ವರ್ಷ ಸಾರ್ವತ್ರಿಕ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಆಯಕಟ್ಟಿನ ಹುದ್ದೆಗಳಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅದೇ ಸ್ಥಳದಲ್ಲಿ ಮುಂದುವರಿಯಲು ಅಥವಾ ತಮಗೆ ಬೇಕಾದ ಹುದ್ದೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಆಪ್ತ ಶಾಸಕರು, ಸಚಿವರ ಮೂಲಕ ಶಿಾರಸು ಮಾಡಿಸಿ ಲಾಬಿ ನಡೆಸುತ್ತಾರೆ. ವರ್ಗಾವಣೆ ಆದರೂ ಆ ಸ್ಥಳಕ್ಕೆ ಹೋಗಿ ಅಧಿಕಾರ ಸ್ವೀಕರಿಸುವುದಿಲ್ಲ. ಮತ್ತೆ ಕೆಲವು ಪ್ರಕರಣಗಳಲ್ಲಿ ಪ್ರಭಾವಿ ಅಧಿಕಾರಿ, ಸಿಬ್ಬಂದಿ ಲಾಬಿ ಮಾಡಿಕೊಂಡು
ತನಗೆ ಬೇಕಾದ ಸ್ಥಳವನ್ನು ಗಿಟ್ಟಿಸಿಕೊಂಡಾಗ ಆ ಜಾಗದಲ್ಲಿ ಇರುವ ಅಧಿಕಾರಿ, ಸಿಬ್ಬಂದಿಯನ್ನು ಬೇರೆಗೆ ವರ್ಗಾವಣೆ ಮಾಡಿದಾಗ ಇಲಾಖೆಯಿಂದ ಸ್ಥಳ ತೋರಿಸದೆ ಹಾಗೆ ಖಾಲಿ ಬಿಟ್ಟಿರುತ್ತಾರೆ. ಪ್ರತಿ ಇಲಾಖೆಯಲ್ಲೂ ಹೀಗೆ ಸ್ಥಳ ನಿರೀಕ್ಷೆಯಲ್ಲಿ ಇರುವ ನೂರಾರು ಅಧಿಕಾರಿ, ಸಿಬ್ಬಂದಿ ಸಿಗುತ್ತಾರೆ. ವರ್ಷಗಟ್ಟಲೆ ಕೇಂದ್ರ ಸ್ಥಳದಲ್ಲಿ ಹಾಜರಾತಿ ಹಾಕಿಕೊಂಡು ಕಾಲ ಕಳೆಯುತ್ತಾರೆ. ಇಷ್ಟ ಇಲ್ಲದ ಹುದ್ದೆಗೆ ಹೋಗಿ ಅಧಿಕಾರ ಸ್ವೀಕರಿಸಿದರೆ ಮತ್ತೆ ವರ್ಗಾವಣೆ ಅವಧಿ ಬರುವವರೆಗೂ ಕಾಯಬೇಕೆಂಬ ಕಾರಣಕ್ಕೆ ತಮಗೆ ಬೇಕಾದ ಹುದ್ದೆ ಸಿಗುವವರೆಗೂ ಕಾಯುತ್ತಾರೆ.
ಇದರಿಂದ ಸರ್ಕಾರಕ್ಕೆ ಆರ್ಥಿಕ ಮತ್ತು ಮಾನವ ಸಂಪನ್ಮೂಲ ನಷ್ಟವಾಗಲಿದೆ. ಈ ಬಗ್ಗೆ ಲೋಕಾಯುಕ್ತ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಶಾಲಿನಿ ರಜನೀಶ್, ಎಲ್ಲ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.