ಬೆಂಗಳೂರು: ಸ್ಥಗಿತಗೊಂಡ ಮತ್ತು ಹಂಚಿಕೆಯಾಗದೆ ಉಳಿದ 574 ಮದ್ಯದಂಗಡಿಗಳನ್ನು ಆನ್‌ಲೈನ್ ಮೂಲಕ ಇ- ಹರಾಜು ಹಾಕುವ ಪ್ರಕ್ರಿಯೆಯನ್ನು ಅಬಕಾರಿ ಇಲಾಖೆ, ಜುಲೈನಲ್ಲಿ ಕೈಗೊಳ್ಳಲಿದೆ.
ಸನ್ನದುಗಳ ಹರಾಜು ಹಾಕುವುದಕ್ಕೆ ಎದುರಾಗಿದ್ದ ನ್ಯಾಯಾಲಯದ ಅಡೆತಡೆ ಸೇರಿ ಎಲ್ಲ ಸಮಸ್ಯೆ ಬಗೆಹರಿಸಿಕೊಂಡ ಇಲಾಖೆ, ಆನ್‌ಲೈನ್‌ನಲ್ಲಿ ಹರಾಜು ಹಾಕಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಇದರಿಂದ 600 ಕೋಟಿ ರೂ.ಆದಾಯ ನಿರೀಕ್ಷೆ ಇಟ್ಟುಕೊಂಡಿದೆ.
ಪರಿಶಿಷ್ಟ ಜಾತಿ(ಎಸ್ಟಿ) ವರ್ಗಕ್ಕೆ 72 ವೈನ್‌ಶಾಪ್ (ಸಿಎಲ್-2), 14 ಬಾರ್ ಆ್ಯಂಡ್ ರೆಸ್ಟೋರೆಟ್ (ಸಿಎಲ್-9) ಹಾಗೂ ಪರಿಶಿಷ್ಟ ಪಂಗಡ( ಎಸ್ಟಿ) ಸಮುದಾಯಕ್ಕೆ 14 ವೈನ್ ಶಾಪ್ ಮತ್ತು 3 ಸಿಎಲ್ - 9 ಸನ್ನದು ಮೀಸಲಿಡಲಾಗಿದೆ.
1987ರಲ್ಲಿ ನಿಗದಿಯಾಗಿದ್ದ ವೈನ್‌ಶಾಪ್ ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ ಕೋಟಾದಡಿ ಬಾಕಿ ಉಳಿದ, ಸ್ಥಗಿತಗೊಂಡ, ಮುಟ್ಟುಗೋಲು ಹಾಕಿಕೊಂಡ, ನವೀಕರಿಸದ, ಪ್ರಾರಂಭವಾಗದ, ಹಿಂಪಡೆದ ಮತ್ತು ರದ್ದುಗೊಳಿಸಿದ ಸನ್ನದು ಅನ್ನು ‘ಸಿಎಲ್-2ಎ’ ಹಾಗೂ ‘ಸಿಎಲ್-9ಎ’ ಎಂದು ವರ್ಗೀಕರಿಸಿ ಈಗಾಗಲೇ ಹರಾಜು ಪಟ್ಟಿಗೆ ಸೇರಿಸಲಾಗಿದೆ.ಇವುಗಳನ್ನು ಕಾಲ ಕಾಲಕ್ಕೆ ನಿಗದಿಪಡಿಸಿರುವ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕ ಪಾವತಿ ಯಶಸ್ವಿ ಬಿಡ್‌ದಾರರಿಗೆ ಮಾರಾಟ ಮಾಡಲಾಗುತ್ತದೆ. ಸನ್ನದುಗಳನ್ನು ಇ-ಹರಾಜು ಹಾಕಲು 2025ರ ಡಿಸೆಂಬರ್‌ನಲ್ಲಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಬಿಡ್‌ದಾರರ ನೋಂದಣಿಗೆ ಅವಕಾಶ ನೀಡಲಾಯಿತು. ನೋಂದಣಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಯಶಸ್ವಿ ಬಿಡ್‌ದಾರರಿಗೆ ಮುಂದಿನ 5 ವರ್ಷವರೆಗೆ ಲೈಸೆನ್ಸ್ ಮಂಜೂರಾತಿ ಮಾಡಲಾಗುತ್ತದೆ.
ಬಿಡ್‌ನಲ್ಲಿ ಭಾಗಿಯಾಗುವ ಬಿಡ್‌ದಾರನು ಎಷ್ಟೂ ಬೇಕಾದರೂ ಲೈಸೆನ್ಸ್ ಖರೀದಿಸಲು ಅವಕಾಶ ನೀಡಲಾಗಿದೆ. ಗೆಲ್ಲುವ ಬಿಡ್ ಮೌಲ್ಯವನ್ನು ಯಶಸ್ವಿ ಬಿಡ್ಡರ್ ಎಂದು ಪರಿಗಣಿಸಲಾಗುತ್ತದೆ. ಗೆಲ್ಲುವ ಬಿಡ್ ಮೌಲ್ಯದ ಕನಿಷ್ಠ ಶೇ.50 ಶುಲ್ಕ ಪಾವತಿಸಿದ ನಂತರ ಅಂಗೀಕಾರ ಪತ್ರ(ಎಲ್‌ಒಎ) ನೀಡಲಾಗುತ್ತದೆ. ಇಲಾಖೆ ನಿಯಮದಂತೆ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಸನ್ನದು ಕಾರ್ಯ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು.