ಸಾಂದರ್ಭಿಕ ಚಿತ್ರ ( Namma Metro ) 
ರಾಜ್ಯ

ಮೆಟ್ರೋದಲ್ಲಿ ಮದ್ಯದ ಬಾಟಲಿಗೆ ಅನುಮತಿ? BMRCL ತಾತ್ವಿಕ ಅನುಮೋದನೆ, ಜಾರಿ ಯಾವಾಗ? Namma Metro

ಪ್ರಮುಖ ಮುಖ್ಯಾಂಶಗಳು

  • ನಮ್ಮ ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಸಿಗಲಿದೆ ಅನುಮತಿ
  • ಇತ್ತೀಚೆಗೆ ನಡೆದ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಿದ ಬಿಎಂಆರ್​ಸಿಎಲ್​
  • ನಮ್ಮ ಮೆಟ್ರೋದ ನೀಲಿಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಸೇವೆ ಆರಂಭವಾದ ಬಳಿಕ ಜಾರಿ
ಬೆಂಗಳೂರು: ಸೀಲ್ ಆಗಿರುವ ಮದ್ಯದ ಬಾಟಲಿಗಳನ್ನು ನಮ್ಮ ಮೆಟ್ರೋ ( Namma Metro ) ದಲ್ಲಿ ಪ್ರಯಾಣಿಕರು ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು! ಇತ್ತೀಚೆಗೆ ನಡೆದ ಸಭೆಯಲ್ಲಿ ಈ ವಿಚಾರವಾಗಿ ಬಿಎಂಆರ್‌ಸಿಎಲ್ ತಾತ್ವಿಕ ಅನುಮೋದನೆ ನೀಡಿದೆ ಎನ್ನಲಾಗಿದ್ದು, ಎರಡು ವರ್ಷಗಳಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.
ಪ್ರಸ್ತುತ, ದೆಹಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ ಮದ್ಯ ಸಾಗಿಸಲು ಅವಕಾಶವಿದೆ. ನಮ್ಮ ಮೆಟ್ರೋದ ನೀಲಿಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಸೇವೆ ಆರಂಭವಾದ ಬಳಿಕ ಮದ್ಯಪ್ರಿಯರು ಬಾಟಲ್‌ಗಳನ್ನು ತಮ್ಮ ಜತೆ ಒಯ್ಯಬಹುದು ಎಂದು ಹೇಳಲಾಗುತ್ತಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವುದರಿಂದ ಮದ್ಯಪಾನದ ನಂತರವೂ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ. ಆದರೆ, ಮೆಟ್ರೋದಲ್ಲಿ ಸೇವನೆ ನಿಷೇಧಿಸಲಾಗಿದೆ. ಅದೇ ರೀತಿ ಮದ್ಯ ಸಾಗಣೆಗೆ ಸದ್ಯ ಅನುಮತಿ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಅನುಮತಿ ಲಭಿಸಿದರೂ ಮಿತಿಯೊಳಗೆ ಇದ್ದರೆ ಒಳ್ಳೆಯದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿಷೇಧಿತ ವಸ್ತುಗಳು ಯಾವುವು?

ಬಿಎಂಆರ್‌ಸಿಎಲ್ 8 ವಿಭಾಗಗಳಲ್ಲಿ 58 ನಿಷೇಧಿತ ವಸ್ತುಗಳನ್ನು ಗುರುತಿಸಿದೆ. ಅವುಗಳಲ್ಲಿ ಬಂದೂಕು, ಸ್ಪೋಟಕ ವಸ್ತುಗಳು, ಚೂಪಾದ ವಸ್ತುಗಳು, ಉಪಕರಣಗಳು, ಸುಡುವ ವಸ್ತುಗಳು, ನಿಷ್ಕ್ರಿಯಗೊಳಿಸುವ ರಾಸಾಯನಿಕಗಳು, ಆಕ್ರಮಣಕಾರಿ ವಸ್ತುಗಳು ಮತ್ತಿತರ ಉತ್ಪನ್ನಗಳು ಸೇರಿವೆ. ಇದರಲ್ಲಿ ಮದ್ಯವನ್ನು ಸುಡುವ ವಸ್ತುಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.