Life threats to married lovers!
ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಯುವಜೋಡಿ ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಶಶಿಕಲಾ (29) ಹಾಗೂ ಹೊಸಕೋಟೆ ತಾಲೂಕಿನ ಹಳೇಯೂರಿನ ಪ್ರವಿಣ್ (24) ಪ್ರೇಮಿಗಳು. ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮಹಿಳಾ ಪೊಲೀಸ್ ಠಾಣೆಗೆ ಬಂದು ರಕ್ಷಣೆ ಪಡೆದಿದ್ದಾರೆ.
5 ವರ್ಷಗಳಿಂದಲೂ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲು ಯತ್ನಿಸಲಾಗಿದೆ ಎನ್ನಲಾಗಿದೆ. ಇದರಿಂದ ಜೋಡಿ ಮನೆ ಬಿಟ್ಟು ಬಂದಿದ್ದು, ದೇಗುಲದಲ್ಲಿ ಶಶಿಕಲಾಗೆ ಪ್ರವಿಣ್ ತಾಳಿ ಕಟ್ಟಿದ್ದಾನೆ. ಬಳಿಕ ರಕ್ಷಣೆ ಬಯಸಿ ದಾಖಲೆ ಸಮೇತ ಇಬ್ಬರೂ ಇಲ್ಲಿನ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಇದರಿಂದ ಪ್ರೇಮಿಗಳ ಪಾಲಕರನ್ನು ಕರೆಸಿಕೊಂಡ ಪೊಲೀಸರು, ನಿಯಮಾನುಸಾರ ಹೇಳಿಕೆ ಪಡೆದು ಬಳಿಕ ಕಳುಹಿಸಿದ್ದಾರೆ. ಇನ್ನು ದೂರದ ಸಂಬಂಧದಲ್ಲಿ ಶಶಿಕಲಾ ಹಾಗೂ ಪ್ರವಿಣ್ ಅಕ್ಕ ತಮ್ಮ ಆಗುತ್ತಾರೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದು ಇದನ್ನು ಪ್ರೇಮಿಗಳು ನಿರಾಕರಿಸಿದ್ದಾರೆ.