- ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್
- 17 ವರ್ಷ ಹಿಂದಿನ ತ್ರಿವಳಿ ಕೊಲೆ ಪ್ರಕರಣ
ಬೆಂಗಳೂರು: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನಿವೃತ್ತ ಪ್ರೊಫೆಸರ್ ಹಾಗೂ ಗಣಿತತಜ್ಞರಾಗಿದ್ದ ಪುರುಷೋತ್ತಮ ಲಾಲ್ ಸಚ್ದೇವ್, ಅವರ ಪತ್ನಿ ಮತ್ತು ಪುತ್ರನನ್ನು ಆರ್.ಟಿ. ನಗರದ ಮನೆಯಲ್ಲಿ ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಅವರನ್ನು ದೋಷಿಗಳು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ. ತೀರ್ಪಿನಲ್ಲಿ ವಲಸೆ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಏರಿಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ವಲಸೆ ಕಾರ್ಮಿಕರ ನೋಂದಣಿ ಮತ್ತು ಹಿನ್ನಲೆ ಪರಿಶೀಲನೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಗರದ ಐಐಎಸ್ಸಿಯ ನಿವೃತ್ತ ಪ್ರೊೆಸರ್ ಆಗಿದ್ದ ಪುರುಷೋತ್ತಮ ಲಾಲ್ ಸಚ್ದೇವ್ ಅವರು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಆರ್.ಟಿ. ನಗರದ ಮನೆಯಲ್ಲಿ ವಾಸವಾಗಿದ್ದರು. ಇವರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಗಳಾದ ಪಶ್ಚಿಮ ಬಂಗಾಳ ಮೂಲದ ದೀಪಕ್ ಹಲ್ದಾರ್ ಮತ್ತು ಸುಚಿತ್ರಾ ಎಂಬವರು ಸಂಚು ರೂಪಿಸಿ 2009ರ ಫೆ. 16ರಂದು ಮೂವರನ್ನು ಕೊಲೆಗೈದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇವರ ಕೃತ್ಯಕ್ಕೆ ಮಹಮ್ಮದ್ ಸರ್ಬಾಲ್ ಮತ್ತು ಬಿದನ್ ಶಿಕಾರಿ ಸಹಾಯ ಮಾಡಿದ್ದರು. ಆರೋಪಿಗಳನ್ನು 30 ದಿನಗಳ ನಂತರ ಬಂಧಿಸಿದ್ದ ಪೊಲೀಸರು ಚಾರ್ಜ್ಶೀಟ್ ಸಲ್ಲಿಸದ್ದರು. ಆದರೆ, ವಿಚಾರಣಾ ನ್ಯಾಯಾಲಯವು 2016ರ ಫೆ. 29ರಂದು ಇವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.