ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಆಶೀರ್ವಚನ ನೀಡಿದರು. ಯರಡೋಣಿ ಅಮರೇಶ ಶಾಸ್ತ್ರಿ, ಸಿದ್ಧಲಿಂಗ ಶಿವಾಚಾರ್ಯ, ಮತ್ತಿತರರಿದ್ದರು.
- ಶ್ರೀಶೈಲ ಜಗದ್ಗುರುಗಳ ಅಭಿಮತ
- ನೂತನ ರಥೋತ್ಸವ, ಜನ ಜಾಗೃತಿ ಧರ್ಮಸಭೆ
ಸಿಂದಗಿ: ಅಧ್ಯಾತ್ಮ ಅರಿಯಲು ಪರಿಶುದ್ಧ ಮನಸ್ಸು ಬೇಕು. ಮನಸ್ಸು ಮತ್ತು ಆತ್ಮ ಪಾವಿತ್ರ್ಯವನ್ನು ಸಾಕ್ಷೀಕರಿಸುವ ಅಧ್ಯಾತ್ಮದತ್ತ ಭಕ್ತರ ಗಮನ ಹರಿದರೆ ಬದುಕು ಪಾವನವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಹೇಳಿದರು.
ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ದಾರುಕಾಚಾರ್ಯರ ನೂತನ ರಥೋತ್ಸವ ಹಾಗೂ ಲಿಂ. ಮರುಳಾರಾಧ್ಯ ಶಿವಾಚಾರ್ಯರ 112ನೇ ಜಯಂತ್ಯುತ್ಸವ ನಿಮಿತ್ತ ಸೋಮವಾರ ಜರುಗಿದ ಜನಜಾಗೃತಿ ಧರ್ಮಸಭೆಯ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜಾತಿ-ಮತ-ಪಂಥಗಳನ್ನು ಬದಿಗೊತ್ತಿ, ಸರ್ವರೂ ಸರ್ವದೊಳು ಒಂದಾಗಿ ಅಂತರಂಗ ಮತ್ತು ಬಹಿರಂಗದ ಒಳಗೊಳ್ಳುವಿಕೆಯೊಂದಿಗೆ ಮನಸ್ಸನ್ನು ಭಕ್ತಿಯಿಂದ ಹದಗೊಳಿಸಿ, ಗುರುವಿನ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಎಲ್ಲರ ಜೀವನ ಮುಕ್ತಿ ಸಾಧ್ಯ. ಭಾರತೀಯ ಸಂಸ್ಕೃತಿಯಲ್ಲಿನ ಸಾಮರಸ್ಯ ಮತ್ತು ಮಾನವೀಯತೆ ಸಮಾಜದಲ್ಲಿ ಶಾಂತಿ ಸಹೋದರತ್ವ ಬಿಂಬಿಸುತ್ತದೆ ಎಂದು ಹೇಳಿದರು.
ಯರಡೋಣಿ ಅಮರೇಶ ಶಾಸ್ತ್ರಿ ಪ್ರವಚನ ನೀಡಿ, ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು.
ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು. ದೇವರಹಿಪ್ಪರಗಿ ವೀರ ಮಹಾಂತ ಶಿವಾಚಾರ್ಯರು, ಕನ್ನೂರ ಸೋಮನಾಥ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮತ್ತಿತರರಿದ್ದರು.
ಸಂಗೀತ ಶಿಕ್ಷಕ ರೇಣುಕ ಗವಾಯಿಗಳು, ಕೆರುಟಗಿ ಮಹಾಂತೇಶ ಕಾಳಗಿ ಜೇವರ್ಗಿ ಅವರು ಸಂಗೀತೆ ಸೇವೆ ನಡೆಸಿದರು.
ಧರ್ಮ ಪ್ರಚಾರ, ಸಾಮಾಜಿಕ ಸಾಮರಸ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಕನ್ನೊಳ್ಳಿ ಹಿರೇಮಠವು ಜಾತಿ, ಭೇದವಿಲ್ಲದೆ ಲಿಂಗದೀಕ್ಷೆ ನೀಡುವಂತಹ ಪ್ರಗತಿಪರ ಚಿಂತನೆಗಳಿಗೆ ಹೆಸರುವಾಸಿಯಾಗಿದೆ. ಲಿಂಗೈಕ್ಯ ಮರುಳಾರಾಧ್ಯ ಶಿವಾಚಾರ್ಯರ ಪವಾಡಗಳು ಭಕ್ತರನ್ನು ಸೆಳೆದಿದೆ. ಶ್ರೀಮಠದ ಪ್ರಗತಿ ಕಾರ್ಯಗಳು ನಾಡಿಗೆ ಪಸರಿಸಲಿ.
ಡಾ. ಚನ್ನಸಿದ್ಧರಾಮ ಶಿವಾಚಾರ್ಯ, ಶ್ರೀಶೈಲ ಪೀಠ.