ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಅಮೃತ ಮಹೋತ್ಸವ ನಿಮಿತ್ತ ಅಮೃತ ಜಲ ಅರವಟ್ಟಿಗೆಗೆ ಚಾಲನೆ ನೀಡಲಾಯಿತು. ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶಶಿಧರ ಕೋಸಂಬೆ, ಚಂದ್ರಕಾಂತ ಪಾಟೀಲ್ ಇತರರಿದ್ದರು.
ಭಾಲ್ಕಿ: ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಇಡಿ ಬದುಕು ಬಸವತತ್ವ ಪ್ರಚಾರ ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದು ಹಂದಿಗುಂದ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಹಿರೇಮಠ ಸಂಸ್ಥಾನ ಮತ್ತು ಅಭಿನಂದನಾ ಸಮಿತಿಯಿಂದ ಆಯೋಜಿಸಿದ್ದ ಅಮೃತ ಜಲ ಅರವಟ್ಟಿಗೆ ಚಾಲನೆ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ವಿಚಾರಧಾರೆ ಮೈಗೂಡಿಸಿಕೊಂಡು ಕರ್ನಾಟಕ ಸೇರಿ ಅಂತರ ರಾಜ್ಯಗಳಲ್ಲಿ ಬಸವತತ್ವ ಪ್ರಚಾರಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಅಂತಹ ಪೂಜ್ಯರು ಅಮೃತ ಮಹೋತ್ಸವ ಆಚರಿಸಿ ಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದರು.
ಅಮೃತ ಮಹೋತ್ಸವ ನಿಮಿತ್ತ ಈಗಾಗಲೇ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳು ಜರಗುತ್ತಿವೆ. ಇಂತಹ ಸಂದರ್ಭದಲ್ಲಿ ಭಕ್ತರಿಗೆ ನೀರಿನ ದಾಹ ತಣಿಸಲು ಚನ್ನಬಸವಾಶ್ರಮ ಪರಿಸರದಲ್ಲಿ ಅಮೃತ ಜಲ ಹೆಸರಿನಲ್ಲಿ ನೀರಿನ ಅರವಟ್ಟಿಗೆ ತೆರೆದಿರುವುದು ಸೂಕ್ತವೆನಸಿದೆ ಎಂದು ತಿಳಿಸಿದರು.
ಶ್ರೀ ಪ್ರಭುಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ ಕೋಸಂಬೆ, ದಾಸೋಹ ಸಮಿತಿ ಅಧ್ಯಕ್ಷರು, ಪುರಸಭೆ ಮಾಜಿ ಅಧ್ಯಕ್ಷರು ಆಗಿರುವ ಚಂದ್ರಕಾಂತ ಪಾಟೀಲ್, ವಾಲಿಬಾಲ್ ಪಂದ್ಯಾವಳಿ ಸಮಿತಿ ಅಧ್ಯಕ್ಷ ವಿಲಾಸ ಬಕ್ಕಾ, ಪ್ರಮುಖರಾದ ಸತ್ಯವಾನ ವೈರಾಗ್ಯ, ಶರಣಪ್ಪ ಬಿರಾದಾರ್, ಸಿದ್ದಯ್ಯ ಕವಡಿಮಠ, ವಿಶ್ವನಾಥಪ್ಪ ಬಿರಾದಾರ್, ಬಾಬುರಾವ ಹುಣಜೆ, ಚಂದ್ರಕಾಂತ ಹೈಬತಪುರೆ, ರಮೇಶ ಪಟ್ನೆ, ಶಿವಕುಮಾರ ಕಮಠಾಣೆ, ಶಾಂತಯ್ಯ ಸ್ವಾಮಿ, ಮಲ್ಲಮ್ಮ ನಾಗನಕೇರೆ, ಮಲ್ಲಮ್ಮ ಆರ್. ಪಾಟೀಲ್, ದೀಪಕ ಠಮಕೆ ಇತರರಿದ್ದರು.