ಹುಮನಾಬಾದ್ನ ಯಲಾಲ ಶಿಕ್ಷಣ ಸಂಸ್ಥೆಯಲ್ಲಿ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಬಸವತೀರ್ಥ ವಿದ್ಯಾಪಿಠದ ಕೇಂದ್ರ ಸಮಿತಿ ಅಧ್ಯ ಕಂಟೆಪ್ಪ ದಾನ ಗುರುವಾರ ಉದ್ಘಾಟಿಸಿದರು. ಡಾ.ಸೋಮನಾಥ ಯಾಳವಾರ, ಡಾ.ಎಸ್.ಆರ್. ಮಠಪತಿ, ಮಲ್ಲಿಕಾರ್ಜುನ ಸಂಗಮಕರ್, ಬಸವರಾಜ ರುದ್ರವಾಡಿ, ಶಾಂತವೀರ ಯಲಾಲ ಇತರರಿದ್ದರು.
ಹುಮನಾಬಾದ್: ಶ್ರಾವಣ ಮಾಸ ಲಿಂಗಾಯತರಿಗೆ ಪವಿತ್ರವಾದದ್ದು. ಆದರೆ ಶರಣರ ವಿಚಾರದಲ್ಲಿ ಪ್ರತಿದಿನವೂ ಪವಿತ್ರವೇ. ಅಂತಲೇ ಪ್ರತಿಯೊಬ್ಬರೂ ಶರಣರ ವಚನಗಳನ್ನು ಓದಿ ಅದರಲ್ಲಿರುವ ತತ್ವಗಳನ್ನು ಜೀವನದಲ್ಲಿ ಅನುಸರಿಸಬೇಕು ಎಂದು ಬಸವತೀರ್ಥ ವಿದ್ಯಾಪಿಠದ ಕೇಂದ್ರ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನ ಹೇಳಿದರು.
ಬಸವ ಸೇವಾ ಪ್ರತಿಷ್ಠಾನ ಹಾಗೂ ಬಸವಪರ ಸಂಘಟನೆಗಳ ಸಹಯೋಗದಡಿ ಪಟ್ಟಣದ ಯಲಾಲ ಶಿಕ್ಷಣ ಸಂಸ್ಥೆಯಲ್ಲಿ ಶ್ರಾವಣ ನಿಮಿತ್ತ ಆಯೋಜಿಸಿರುವ ಶರಣರ ಜೀವನ ದರ್ಶನ ಪ್ರವಚನಕ್ಕೆ ಗುರುವಾರ ಚಾಲನೆ ನೀಡಿದ ಅವರು, ಶರಣರ ಆದರ್ಶಗಳ ಪಾಲನೆಯಿಂದ ಬದುಕು ಸುಂದರಗೊಳ್ಳುವುದರ ಜತೆ ಸಮಾಜದಲ್ಲಿ ಉತ್ತಮ ಸಂಸ್ಕಾರ ಮತ್ತು ಸಾಮರಸ್ಯ ಬೆಳೆಯಲಿದೆ ಎಂದರು.
ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಮಾತನಾಡಿ, ಬದುಕಿನ ಎಲ್ಲ ರಂಗಗಳಲ್ಲೂ ಏಕತೆ ಸಾಧಿಸುವವನೇ ಶರಣ. ಸಾಮರಸ್ಯ, ಅರಿವು, ಆಚಾರ, ನಡೆ-ನುಡಿ, ದಯೆ ಮತ್ತು ಧರ್ಮದ ಮೂಲಕ ಲೋಕದ ಹಿತ ಬಯಸುವವನೇ ನಿಜವಾದ ಶರಣ ಎಂದು ಪ್ರತಿಪಾದಿಸಿದರು.
ಡಾ.ಎಸ್.ಆರ್. ಮಠಪತಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಸಂಗಮಕರ್ ಮಾತನಾಡಿ, ಶ್ರಾವಣ ಮಾಸದ ಪ್ರತಿದಿನ ಅನುಭಾವಿಗಳಿಂದ ಶರಣರ ಜೀವನ ದರ್ಶನ ಪ್ರವಚನ ನಡೆಯಲಿದೆ. ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರವಚನ ಆಲಿಸಿ ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಮುಖರಾದ ಶಿವಶಂಕರ ತರನಳ್ಳಿ, ಬಸವರಾಜ ರುದ್ರವಾಡಿ, ಶಾಂತವೀರ ಯಲಾಲ, ಮಲ್ಲಿಕಾರ್ಜುನ ರಟಕಲ್, ಶಂಕರ ನಂದಿ, ಮಹಾದೇವ ಉಪ್ಪಿನ, ಚನ್ನಬಸಪ್ಪ ವಡ್ಡನಕೇರಿ, ಬಾಬುರಾವ ವಾಡೆ, ಮಡಿವಾಳಯ್ಯ ಸ್ವಾಮಿ, ಮಹೇಶ ಹುಡೇದ್, ನಿರಂಕಾರ ತುಪ್ಪದ್, ಬಾಬುರಾವ ಪರ್ತಪುರ, ಸರೋಜಾ ಕಲ್ಯಾಣಕರ್, ಶೋಭಾ ಔರಾದೆ, ಶಶಿಕಲಾ ರುದ್ರವಾಡಿ, ಶೋಭಾ ಪಾರಾ, ಮಹಾದೇವಿ ನಂದಿ, ಗೌರಮ್ಮ ಬಾಲಕುಂದೆ, ಬಿಜಲಾವತಿ ತುಪ್ಪದ, ಜಯಶ್ರೀ ಕಾಳಗಿ ಹಾಗೂ ಗೀತಾ ಮುಗಳಿ ಉಪಸ್ಥಿತರಿದ್ದರು. ಪಂಡಿತ ಬಾಳೂರೆ ಸ್ವಾಗತಿಸಿದರು. ಶರಣಬಸಪ್ಪ ಪಾರಾ ನಿರೂಪಣೆ ಮಾಡಿದರು. ಕುಪ್ಪಣ್ಣ ಮುಗಳಿ ವಂದಿಸಿದರು.