ಕಲಬುರಗಿ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಸಗೊಬ್ಬರ ಅಂಗಡಿಗಳ ಡೀಲರ್​, ಕೃಷಿ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಇಕ್ರಮ್​ ಶರೀಪ್​ ಸೋಮವಾರ ಸಭೆ ನಡೆಸಿದರು. ಪ್ರೊಬೇಷನರಿ ಐಎಎಸ್​ ಅಧಿಕಾರಿ ಶಿಖರ್​ ಮೋಘಾ, ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​ ಇತರರಿದ್ದರು. 
ರಾಜ್ಯ

ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಪರವಾನಿಗೆ ರದ್ದು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಪ್​ ಖಡಕ್​ ಸೂಚನೆ
  • ಕಲಬುರಗಿಯಲ್ಲಿ ರಸಗೊಬ್ಬರ ಡೀಲರ್​ಗಳೊಂದಿಗೆ ಸಭೆ
ಕಲಬುರಗಿ: ನಿಗದಿತ ಎಂಆರ್​ಪಿಗಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ವಿರುದ್ದ ನಿರ್ದಾಣ್ಯ ಕ್ರಮ ಕೈಗೊಳ್ಳುವುದರ ಜತೆಗೆ ಆ ಕೃಷಿ ಪರಿಕರ ಮಾರಾಟ ಅಂಗಡಿಗಳ ಪರವಾನಿಗೆಯನ್ನೂ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ರಸಗೊಬ್ಬರ ಅಂಗಡಿಗಳ ಡೀಲರ್​-ರಿಟೇಲರ್​ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರಿಂದ ದೂರು ಬರುತ್ತಿವೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಡಿಎಪಿ 50 ಕೆಜಿ ಬ್ಯಾಗಿಗೆ 1,350 ರೂ., ಯೂರಿಯಾ 45 ಕೆ.ಜಿ. ಬ್ಯಾಗಿಗೆ 266 ರೂ. ಎಂಆರ್​ಪಿ ದರವಿದ್ದು, ಇದಕ್ಕಿಂತ ಒಂದು ರೂಪಾಯಿ ಹೆಚ್ಚು ಪಡೆದರೆ ಹುಷಾರ್​ ಎಂದು ಎಚ್ಚರಿಕೆ ನೀಡಿದರು.
ತಾಲೂಕಿಗೊಂದು ತಂಡ
ಹೆಚ್ಚಿನ ದರದಲ್ಲಿ ಮಾರಾಟ ಹಾವಳಿ ತಡೆಯಲು ತಾಲೂಕಿಗೊಂದು ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಬೇಕು. ಎಸಿ, ತಹಶೀಲ್ದಾರ್​, ಕೃಷಿ, ತೋಟಗಾರಿಕೆ ಎಲ್ಲಾ ಅಧಿಕಾರಿಗಳು ಹೋಬಳಿ, ತಾಲೂಕಿಗೆ ಹೋಗಿ ನಿತ್ಯ ಸುಮಾರು 25 ರಸಗೊಬ್ಬರ ಅಂಗಡಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಪಿಓಎಸ್​ ದಾಸ್ತಾನು ಪರಿಶೀಲಿಸಬೇಕು ಎಂದರು.
ರಸಗೊಬ್ಬರ ಸಮಸ್ಯೆ ಕುರಿತು ರೈತರ ಅಹವಾಲು ಆಲಿಸಲು ಸಹಾಯವಾಣಿ ಸ್ಥಾಪಿಸಬೇಕು. ಪ್ರಸ್ತುತ ಬೇಡಿಕೆ ಅನುಗುಣವಾಗಿ ಡಿಎಪಿ ಸೇರಿ ಇತರೆ ರಸಗೊಬ್ಬರಗಳನ್ನು ತಾಲೂಕಿಗೆ ಮರು ಹಂಚಿಕೆ ಮಾಡಬೇಕು. ನಿತ್ಯ ಪಿಓಎಸ್​, ಸ್ಟಾಕ್​ ಅಪಡೇಟ್​ ಮಾಡುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮತ್ತು ಪ್ರತಿ ದಿನದ ವರದಿ ತಮಗೆ ಸಲ್ಲಿಸುವಂತೆ ಜಂಟಿ ಕೃಷಿ ನಿದೇಶಕರಿಗೆ ಸೂಚಿಸಿದರು.
ರೈತನ ಒಳಿತಿಗಾಗಿ ಸಹಕರಿಸಿ
ರಿಟೇಲರ್​ಗಳು ರೈತರಿಗೆ ಹೊಸ ತಂತ್ರಾಜ್ಞಾನದ ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ. ರಸಗೊಬ್ಬರ ತೆಗೆದುಕೊಂಡರೆ ಮಾತ್ರ ಡಿಎಪಿ ನೀಡುತ್ತೇವೆ ಎನ್ನುವುದು ಸಮಂಜಸವಲ್ಲ. ಈ ರೀತಿ ರೈತರಿಗೆ ಯಾವುದೇ ಅಂಗಡಿವರು ಇಂತಹದೆ ರಸಗೊಬ್ಬರ ಪಡೆಯುವಂತೆ ಒತ್ತಾಯ ಮಾಡುವಂತಿಲ್ಲ. ರೈತರಿಗೆ ನೂತನ ತಂತ್ರಾಜ್ಞಾನದ ರಸಗೊಬ್ಬರ ಕುರಿತು ಸಲಹೆ ಮಾತ್ರ ನೀಡಬಹುದು. ಕೊನೆಗೆ ರೈತನ ಇಚ್ಚೆಯಂತೆ ಗೊಬ್ಬರ ಪೂರೈಸಿ, ಜಿಲ್ಲಾಡಳಿತ, ಕೃಷಿ ಇಲಾಖೆಯ ನಿರ್ದೇಶನ ಪಾಲಿಸುವ ಮೂಲಕ ಅನ್ನದಾತನ ಒಳಿತಿಗಾಗಿ ಅಗತ್ಯ ಸಹಕಾರ ನೀಡುವಂತೆಯೂ ರಿಟೇಲರ್​ಗಳಿಗೆ ಮನವಿ ಮಾಡಿದರು.
ಚಿತ್ತಾಪುರ ಪಟ್ಟಣದಲ್ಲಿ ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಏನು ಮಾಡಿದ್ದೀರಿ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಅವರನ್ನು ಕೇಳಿದ ಜಿಲ್ಲಾಧಿಕಾರಿಗಳು, ಕೂಡಲೆ ಸತ್ಯಾಸತ್ಯತೆ ಪರಿಶೀಲಿಸಿ ಅಂಗಡಿ ಮೇಲೆ ಇಂದೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಹಳ್ಳಿಗೆ ಹೋಗ್ರಿ,ರೈತರ ಸಮಸ್ಯೆ ಆಲಿಸಿ
ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಯಾವುದೋ ಮೂಲೆಯಿಂದ ರೈತರು ದೂರು ಹೊತ್ತು ಡಿಸಿ ಕಚೇರಿಗೆ ಬರಬೇಕಾ? ನಿಮಗೆ ಮಾಹಿತಿ ಇಲ್ವಾ ಎಂದು ತೀವ್ರ ಅಸಮಾಧಾನದಿಂದಲೆ ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಮತ್ತೆ ರೈತರಿಂದ ದೂರು ಬಂದಲ್ಲಿ ಡೀಲರ್​&ರಿಟೇಲರ್​ ಜತೆ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 733 ಡೀಲರ್​ಗಳಿದ್ದು, ಇದರಲ್ಲಿ 81 ಹೋಲಸೇಲ್​ ಮತ್ತು 540 ರಿಟೇಲರ್​ ಮಾತ್ರ ಚಾಲ್ತಿಯಲ್ಲಿದ್ದಾರೆ. ಪ್ರಸ್ತುತ ಜಿಲ್ಲೆಯ ಅವಿಭಜಿತ ಏಳು ತಾಲೂಕುಗಳ ರಿಟೇಲ್​ ಶಾಪ್​ಗಳಲ್ಲಿ ವಿಶೇಷವಾಗಿ 2,143 ಮೆಟ್ರಿಕ್​ ಟನ್​ ಡಿಎಪಿ, 6,421 ಮೆಟ್ರಿಕ್​ ಟನ್​ ಯೂರಿಯಾ ಲಭ್ಯವಿದೆ. ಅಫಜಲಪೂರ, ಚಿತ್ತಾಪುರ, ಜೇವರ್ಗಿ, ಕಲಬುರಗಿ ತಾಲೂಕಿನ ತಾಲೂಕಾ ಡೀಲರ್​ ಬಳಿ 2,999 ಮೆಟ್ರಿಕ್​ ಟನ್​ ಡಿಎಪಿ, 3,011 ಮೆಟ್ರಿಕ್​ ಟನ್​ ಯೂರಿಯಾ ದಾಸ್ತಾನು ಲಭ್ಯವಿದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಕಳೆದ 15 ದಿನದಲ್ಲಿ 117 ಕಡೆ ಕೃಷಿ ಅಧಿಕಾರಿಗಳ ತಂಡ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಸುಮಾರು 51 ಅಂಗಡಿಗಳು ನಿಯಮ ಉಲ್ಲಂಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುವುದರಿಂದ ನೋಟಿಸ್​ ಜಾರಿ ಮಾಡಲಾಗಿದೆ. 66.27 ಲ ರೂ. ಮೊತ್ತದ ರಸಗೊಬ್ಬರ ಮಾರಾಟ ಮಾಡದಂತೆ ತಡೆ ಆದೇಶವನ್ನೂ ನೀಡಲಾಗಿದೆ ಎಂದು ತಿಳಿಸಿದರು.
ಪ್ರೊಬೇಷನರ್​ ಐಎಎಸ್​ ಅಧಿಕಾರಿ ಶಿಖರ್​ ಮೋಘಾ, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ್​ ಇತರರಿದ್ದರು.
"

ಅಧಿಕಾರಿಗಳು ಇನ್ಮುಂದೆ ಕಚೇರಿಯಲ್ಲಿ ಕೂಡದೆ ಹಳ್ಳಿ, ಹೋಬಳಿಗೆ ಭೇಟಿ ನೀಡಬೇಕು. ನೀವು ಕ್ಷೇತ್ರಕ್ಕೆ ಭೇಟಿ ನೀಡಿದರೆ ಈ ಸಮಸ್ಯೆ ತಲೆದೋರದು. ರೈತರ ಬಳಿಗೆ ಹೋಗಿ ಅವರ ಅಹವಾಲು ಆಲಿಸಬೇಕು. ಡೀಲರ್​, ರಿಟೇಲರ್​ಗಳು ಸಮಸ್ಯೆ ಅನುಭವಿಸುತ್ತಿದಲ್ಲಿ ಅದರ ನಿವಾರಣೆಗೂ ಪ್ರಯತ್ನಿಸಬೇಕು. ನಿತ್ಯ ಭೇಟಿ, ತಪಾಸಣೆ ಕುರಿತು ಜಿಯೋ ಟ್ಯಾಗ್​ ಫೋಟೊ, ವರದಿ ಸಲ್ಲಿಸಬೇಕು.

— ಇಕ್ರಮ್​ ಶರೀಫ್​, ಜಿಲ್ಲಾಧಿಕಾರಿ, ಕಲಬುರಗಿ.