ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್  
ರಾಜ್ಯ

ಗೌರವ ಡಾಕ್ಟರೇಟ್ ಪ್ರದಾನಕ್ಕೆ ಸಮಿತಿ ರಚಿಸಲು ರಾಜ್ಯಪಾಲರಿಗೆ ಪತ್ರ

ಪ್ರಮುಖ ಮುಖ್ಯಾಂಶಗಳು

  • ಅನೇಕ ವಿಶ್ವವಿದ್ಯಾಲಯಗಳು ಒಬ್ಬನೇ ವ್ಯಕ್ತಿಗೆ ಗೌರವ ಡಾಕ್ಟರೇಟ್‌ಗಳನ್ನು ನೀಡಿರುವ ನಿದರ್ಶನಗಳ ಬಗ್ಗೆ ಕಳವಳ
  • ರಾಜ್ಯದ ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವ ಏಕರೂಪದ ನಿಯಂತ್ರಕ ಮಾರ್ಗಸೂಚಿಗಳನ್ನು ರೂಪಿಸುವುದು ಅಗತ್ಯ
  • ಏಕರೂಪದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಮಾರ್ಗಸೂಚಿಗಳನ್ನು ಶಿಫಾರಸು ಮಾಡಲು ತಜ್ಞರ ಸಮಿತಿಯನ್ನು ರಚಿಸುವ ಅಗತ್ಯ
ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳು ತಮ್ಮ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವ ವಿಚಾರವಾಗಿ ಸೂಕ್ತ ಮಾರ್ಗಸೂಚಿಗಳನ್ನು ಶಿಾರಸು ಮಾಡುವುದಕ್ಕಾಗಿ ತಜ್ಞರ ಸಮಿತಿ ರಚಿಸುವಂತೆ ಕೋರಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ರ ನಿಬಂಧನೆಗಳ ಅಡಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ಕೊಡುಗೆಗಳನ್ನು ಗುರುತಿಸಿ ಗೌರವ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ಆದರೆ, ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅನೇಕ ವಿಶ್ವವಿದ್ಯಾಲಯಗಳು ಒಬ್ಬನೇ ವ್ಯಕ್ತಿಗೆ ಗೌರವ ಡಾಕ್ಟರೇಟ್‌ಗಳನ್ನು ನೀಡಿರುವ ನಿದರ್ಶನಗಳ ಬಗ್ಗೆ ಕಳವಳ ವ್ಯಕ್ತವಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗೌರವ ಪದವಿಗಳ ಘನತೆ, ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ರಾಜ್ಯದ ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವ ಏಕರೂಪದ ನಿಯಂತ್ರಕ ಮಾರ್ಗಸೂಚಿಗಳನ್ನು ರೂಪಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ೆ.21ರಂದು ನಡೆದ ಕುಲಪತಿಗಳ ಸಮ್ಮೇಳನದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಘಟಿಕೋತ್ಸವ, ಶೈಕ್ಷಣಿಕ ವೇಳಾಪಟ್ಟಿ ಮತ್ತು ವಿಶ್ವವಿದ್ಯಾಲಯ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಗೌರವ ಡಾಕ್ಟರೇಟ್ ಪ್ರದಾನಕ್ಕೆ ಸಂಬಂಧಿಸಿದ ವಿಷಯವನ್ನು ಸದರಿ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಲಿಲ್ಲ.
ಈ ಕಾರಣದಿಂದ ಪತ್ರ ಬರೆಯಲಾಗುತ್ತಿದೆ. ಗೌರವ ಡಾಕ್ಟರೇಟ್ ಪ್ರದಾನಕ್ಕೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಪದ್ಧತಿಗಳನ್ನು ಪರಿಶೀಲಿಸಲು, ರಾಜ್ಯಾದ್ಯಂತ ಪಾರದರ್ಶಕತೆ ಮತ್ತು ಏಕರೂಪದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಮಾರ್ಗಸೂಚಿಗಳನ್ನು ಶಿಫಾರಸು ಮಾಡಲು ತಜ್ಞರ ಸಮಿತಿಯನ್ನು ರಚಿಸುವ ಅಗತ್ಯವಿದೆ ಎಂದಿದ್ದಾರೆ.
ಗೌರವ ಪದವಿಗಳನ್ನು ನೀಡುವಾಗ ರಾಜ್ಯ, ಖಾಸಗಿ ಮತ್ತು ವಿಶೇಷ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವ ಏಕರೂಪದ ಮಾನದಂಡ, ಅಗತ್ಯವಿರುವ ನಿಯಮ ಮತ್ತು ನಿಯಂತ್ರಕ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸಲು ಅಗತ್ಯತೆಯನ್ನು ತಿಳಿಸಿದ್ದಾರೆ.