Letter Dasahoha is a supplement to academic progress
ತಿಪಟೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಅಕ್ಷರ ದಾಸೋಹ ಯೋಜನೆಯಿಂದ ಸಾಮಾನ್ಯ ವರ್ಗದ ಜನರ ಮಕ್ಕಳ ಶೈಕ್ಷಣಿಕ ಪ್ರಗತಿ ಸುಧಾರಿಸಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ಎಸ್ವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಇಲಾಖೆಯಿಂದ ಆಯೋಜಿಸಿದ್ದ ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ತ್ರೀಯರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಆತ್ಮಸ್ಥೆ$ರ್ಯ ಹೆಚ್ಚಿಸಿಕೊಳ್ಳಲೆಂದು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇದಕ್ಕೆ ಸಹಾಯಕರನ್ನಾಗಿ ಮಹಿಳೆಯರನ್ನು ನೇಮಿಸಿಕೊಂಡಿದೆ. ಬಿಸಿಯೂಟದ ಯೋಜನೆ ಮಕ್ಕಳ ಭೌತಿಕ ವಿಕಾಸಕ್ಕೆ ಅನುವು ಮಾಡಿಕೊಡಲಿದ್ದು, ಇದರಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಕ್ಕಳನ್ನು ಕಾಣಬೇಕು. ಯಾವುದೇ ಕಾರಣಕ್ಕೂ ಅಪಾಯಗಳಿಗೆ ಆಹ್ವಾನವಾಗದಂತೆ ಕರ್ತವ್ಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.
ತಾಪಂ ಇಒ ಎಚ್.ಎಂ.ಸುದರ್ಶನ್ ಮಾತನಾಡಿ, ಅಕ್ಷರ ದಾಸೋಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನೆಡೆಸುವ ಗುರುತರ ಜವಾಬ್ದಾರಿ ಅಡುಗೆ ಸಿಬ್ಬಂದಿಯದ್ದಾಗಿದೆ. ಇವರು ಎಸ್ಒಪಿ ಅನುಸಾರ ಕಾರ್ಯನಿರ್ವಹಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ತಾರಾಮಣಿ ಮಾತನಾಡಿ, ಅಕ್ಷರ ದಾಸೋಹ ಕೇವಲ ಊಟದ ಯೋಜನೆಯಲ್ಲ. ಇದು ಮಕ್ಕಳಲ್ಲಿ ಸದೃಢತೆಯನ್ನು ಹೆಚ್ಚಿಸಲು, ಶ್ರದ್ಧೆ ಭಕ್ತಿಗಳಿಂದ ಅಭ್ಯಾಸ ಮಾಡಲು ಮತ್ತು ಅತ್ಯುತ್ತಮ ದಾಖಲಾತಿ ಹೊಂದುವಂತೆ ಮಾಡಲು ಪೂರಕವಾಗಿದೆ ಎಂದರು.
ಪ್ರಾಂಶುಪಲ ಕೆ.ಎನ್.ರೇಣುಕಯ್ಯ ಮಾತನಾಡಿ, ಅಕ್ಷರ ದಾಸೋಹ ಯೋಜನೆ ಬೃಹತ್ ಮತ್ತು ಮಹದೋದ್ದೇಶ ಹೊಂದಿದ ಯೋಜನೆಯಾಗಿದೆ. ಇದು ಅಕ್ಷರ ಮತ್ತು ಅನ್ನ ನೀಡುವ ಜತೆಗೆ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಸರ್ಕಾರ ಮಮತೆ, ಕರುಣೆ, ತಾಳ್ಮೆ ಮತ್ತು ಕಾಯಕದಲ್ಲಿ ನಿಷ್ಠೆ ಇರುವ ಹೆಣ್ಣುಮಕ್ಕಳನ್ನು ಗುರುತಿಸಿ ಅವರಿಗೆ ಅಡುಗೆ ಸಹಾಯಕರ ಕೆಲಸ ನೀಡಿರುವುದರಿಂದ ಉತ್ತಮ ಪ್ರಗತಿ ಕಾಣಬಹುದಾಗಿದೆ ಎಂದರು.
ಅಕ್ಷರ ದಾಸೋಹ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಡಿ.ಎಸ್.ಶಿವಶಂಕರ್, ಅಗ್ನಿಶಾಮಕ ದಳದ ಠಾಣಾಧಿಕಾರಿ ನಟರಾಜ್, ಅಡುಗೆ ಸಿಬ್ಬಂದಿಗಳ ತಾಲೂಕು ಘಟಕದ ಅಧ್ಯಕ್ಷೆ ಅನಸೂಯಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ದಕ್ಷಿಣಮೂರ್ತಿ ಇತರರು ಇದ್ದರು.