/ಅಫಜಲಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಎಂ.ವೈ.ಪಾಟೀಲ್ ಮಾತನಾಡಿದರು. ಪ್ರಕಾಶ ಜಮಾದಾರ, ಸಂಜೀವಕುಮಾರ ದಾಸರ, ಶಂಕರ ರಾಠೋಡ್ ಇದ್ದರು.
- ಶಾಸಕ ಎಂ.ವೈ.ಪಾಟೀಲ್ ಸೂಚನೆ
- ಅಫಜಲಪುರದಲ್ಲಿ ಪ್ರಗತಿ ಪರಿಶೀಲನೆ ಸಭೆ
ಅಫಜಲಪುರ: ದೇಶಕ್ಕೆ ಮಾದರಿಯಾದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಕರೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಸ್ಕಾಂ ಸಿಬ್ಬಂದಿ ಸುರಕ್ಷತಾ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಮಳೆಗಾಲ ಪ್ರಾರಂಭವಾಗಿದ್ದು ಮೇಲಾಧಿಕಾರಿಗಳು ನಿಗಾವಹಿಸುತ್ತಿರಬೇಕು. ಅನಾಹುತಗಳಾದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕ್ಷೇತ್ರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಮುಂದಿನ ವಾರದಲ್ಲಿ ಗ್ಯಾರಂಟಿ ಸಮಿತಿ ಹಾಗೂ ಡೀಲರ್ಗಳ ಸಭೆ ನಡೆಸುವ ಕೆಲಸವಾಗಲಿ. ಪಟ್ಟಣದ ಪದವಿ, ಡಿಪ್ಲೊಮಾ ಕಾಲೇಜುಗಳು, ಹೋಲಿ ಕ್ರಾಸ್, ಮಲ್ಲಾಬಾದ್, ದೇಸಾಯಿ ಕಲ್ಲೂರ ಗ್ರಾಮದವರೆಗೆ ನೂತನ ಸಿಟಿ ಬಸ್ ಓಡಿಸಬೇಕು ಎಂದು ಸೂಚನೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಲ್ಲಿ ಮೃತರಾದ ಸದಸ್ಯರ ಗಣತಿ ನಡೆಸಿ ಹಣ ಪೋಲಾಗುವುದನ್ನು ತಪ್ಪಿಸಬೇಕಿದೆ. ಡೀಲರ್ಗಳು ಟೋಕನ್ ಕೊಟ್ಟು ಆಹಾರ ಧಾನ್ಯ ವಿತರಿಸುತ್ತಿಲ್ಲ ಎಂಬ ದೂರುಗಳಿದ್ದು, ಸರಿಪಡಿಸಬೇಕು. ತಾಲೂಕಿನಾದ್ಯಂತ ಗ್ಯಾರಂಟಿ ಸಮಿತಿಯಿಂದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಿಡಿಪಿಒ ಚಂದ್ರಕಾಂತ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ ಮೃತರ ಸಂಖ್ಯೆ 716 ಇದ್ದು, 10 ತಂಡಗಳಿಂದ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲಿಯೇ ಸಮಗ್ರ ಮಾಹಿತಿ ಕೊಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಸಂಜೀವಕುಮಾರ ದಾಸರ, ತಾಪಂ ಇಒ ಶಂಕರ ರಾಠೋಡ್, ಸಮಿತಿ ಸದಸ್ಯರಾದ ಅಂಬರೀಶ ಬುರಲಿ, ದತ್ತಪ್ಪ ಘಾಣೂರ, ರಾಜಕುಮಾರ ಬಬಲಾದ, ಪ್ರವಿಣ ಕಲ್ಲೂರ, ಶಕೀಲ್ ವಡಾಳೆ, ಸುಧಾಕರ ಎಸ್.ಕೆ., ದುಂಡಪ್ಪ ಜಮಾದಾರ, ಬಿಸ್ಮಿಲ್ಲಾ ಖೇಡ, ಅಧಿಕಾರಿಗಳಾದ ಖೈಮೋದ್ದಿನ್, ಚಿದಾನಂದ ಕೊಳ್ಳಿ, ಸತೀಶಕುಮಾರ ಟಿ.ಆರ್., ಹರಿದಾಸ ಚೋಪಡೆ, ನಿಂಗಮ್ಮ ಬಡದಾಳ, ರೇವಮ್ಮ ಮೇತ್ರಿ ಇತರರಿದ್ದರು.
"
ರಾಜ್ಯ ಸರ್ಕಾರದ ಮಹತ್ವಾಕಾಂಯ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಊಹಾಪೋಹಾಗಳಿಗೆ ಯಾರು ಕಿವಿಗೊಡಬಾರದು. ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಪತ್ತೆ ಮಾಡಿ ಯೋಜನೆ ತಲುಪಿಸುವ ಕೆಲಸ ಆಗಬೇಕಿದೆ.
— > ಎಂ.ವೈ.ಪಾಟೀಲ್, ಶಾಸಕ