ಸಮಾನ ಭಾರತದ ಕನಸಿಗೆ ಶ್ರಮಿಸೋಣ equal India
ವೇಮಗಲ್: ಪಟ್ಟಣದ ರಾಮಶೆಟ್ಟಿ ಬಯಲು ರಂಗಮಂದಿರದಲ್ಲಿ ಪಟ್ಟಣ ಪಂಚಾಯಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಡಿ.ಅನುಷಾ ಸೇರಿ ಹಲವು ಗಣ್ಯರು ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.equal India
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್. ವೆಂಕಟೇಶ್ ಮಾತನಾಡಿ, ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಆತ್ಮಗೌರವದ ಸಂಕೇತ. ಡಾ. ಬಿ.ಆರ್.ಅಂಬೇಡ್ಕರ್ ಅವರು ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಿ, ಇಡೀ ದೇಶವನ್ನು ಒಂದುಗೂಡಿಸುವಂತಹ ಅದ್ಭುತ ಸಂವಿಧಾ ನೀಡಿದ್ದಾರೆ. ನಾವು ಅಂಬೇಡ್ಕರ್ ಗುಣಗಾನ ಮಾಡಿದರೆ ಸಾಲದು, ಅವರು ಕಂಡ ‘ಸಮಾನ ಭಾರತ’ದ ಕನಸು ನನಸು ಮಾಡಲು ಶ್ರಮಿಸಬೇಕು. ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಹೊಣೆ ಎಂದು ಕರೆ ನೀಡಿದರು.
ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೌಡರೆಡ್ಡಿ ಮಾತನಾಡಿ, ಇಂದಿನ ಯುವ ಪೀಳಿಗೆ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ಪ್ರಗತಿಯಲ್ಲಿ ಪಾಲುದಾರರಾಗಬೇಕು, ಶಿಕ್ಷಣವೇ ಮಕ್ಕಳಿಗೆ ದೊಡ್ಡ ಆಸ್ತಿ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ. ವೆಂಕಟೇಶ್ ಮಾತನಾಡಿ, ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ. ಇಂದಿನ ಈ ಬೃಹತ್ ಸಮಾರಂಭವು ನಮ್ಮ ಪಟ್ಟಣದ ಒಗ್ಗಟ್ಟನ್ನು ತೋರಿಸುತ್ತಿದೆ. 24 ಶಾಲೆಗಳ ಸುಮಾರು 1,000ಕ್ಕೂ ಹೆಚ್ಚು ಮಕ್ಕಳು ಇಲ್ಲಿ ನೆರೆದಿರುವುದು ಮುಂದಿನ ಪೀಳಿಗೆಯಲ್ಲಿ ದೇಶಪ್ರೇಮ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ. ಪಟ್ಟಣ ಪಂಚಾಯಿತಿ ಜನರ ಸೇವೆಗೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಸುದೀರ್ಘ ಸಮಾಜ ಸೇವೆ ಮಾಡುವ ಮೂಲಕ ಹೆಸರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಚಂಡಳ್ಳಿ ತೋಪಣ್ಣ ಅವರನ್ನು ಸನ್ಮಾನಿಸಲಾಯಿತು. ಎಲ್ಲರಿಗೂ ಸಿಹಿ ಮತ್ತು ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮದ ನಂತರ ಸಿಹಿ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು, ಅಧಿಕಾರಿಗಳು, ಶಿಕ್ಷಕ ವೃಂದ ಹಾಗೂ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ಸಾಕ್ಷಿಯಾದರು.
ಸದಸ್ಯರಾದ ಲೋಕೇಶ್ ಮರಿಯಪ್ಪ, ವಿ.ಎಂ.ನಾಗೇಶ್, ದೀಪಾ ವೆಂಕಟೇಶ್, ಸುಜಾತಾ ಮುನಿರಾಜು, ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ನಾಮನಿರ್ದೇಶರು, ಯೋಜನಾ ಪ್ರಾಧಿಕಾರದ ಸದಸ್ಯರು, ಆಶ್ರಯ ಕಮಿಟಿ ಸದಸ್ಯರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹಲವು ಮುಖಂಡರು ಉಪಸ್ಥಿತರಿದ್ದರು.