ವಿಜಯಪುರದ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ, ಪ್ರಗತಿಪರ ರೈತ ಧರ್ಮಪುರದ ಗೋವಿಂದಪ್ಪ, ಶಿಕ್ಷಕಿ ಸುಕನ್ಯಾ ಬೈರೇಗೌಡ ಹಾಗೂ ಪ್ರಾಂಶುಪಾಲ ಪ್ರದಿಪ್ ಅವರನ್ನು ಸನ್ಮಾನಿಸಲಾಯಿತು. ಟೌನ್ ಕಸಾಪ ಅಧ್ಯಕ್ಷ ಕನಕರಾಜು, ಕಾರ್ಯದರ್ಶಿ ಪರಮೇಶಿ, ಉಪಾಧ್ಯಕ್ಷ ಜೆ.ಆರ್.ಮನುವೀರಣ್ಣ, ಉಪನ್ಯಾಸಕರಾದ ಹರ್ಷ, ನಾಗೇಶ್ ಇತರರು ಇದ್ದರು.
ವಿಜಯಪುರ : ಪ್ರತಿವಿದ್ಯಾರ್ಥಿಯೂ ಜ್ಯೋತಿಯಂತೆ ಬೆಳಗುತ್ತಾ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡಬೇಕು ಎಂದು ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ ಹೇಳಿದರು.
ಪಟ್ಟಣದ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲ ಪ್ರದಿಪ್ ಮಾತನಾಡಿ, ಕಸಾಪ ಸದಸ್ಯತ್ವದ ಶುಲ್ಕ ಅತ್ಯಂತ ಕಡಿಮೆಯಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯಬೇಕು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಭವನಕ್ಕೆ ಒಮ್ಮೆ ಭೇಟಿ ನೀಡಿ ಅದರ ಕಾರ್ಯವೈಖರಿ ತಿಳಿಯಬೇಕು ಎಂದರು.
ಶಿಕ್ಷಕಿ ಸುಕನ್ಯಾ ಬೈರೇಗೌಡ ಮಾತನಾಡಿ, ಭಾಷೆ ಮತ್ತು ಸಂಸತಿಯ ಶಕ್ತಿ ಅಪಾರ. ದೇಶದ ಬೇರಾವುದೇ ಭಾಷೆಗೆ ಸಿಗದಷ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಕಾಲೇಜು ವಿದ್ಯಾರ್ಥಿಗಳು ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಪದ ಹಾಗೂ ಅಂಕಿಗಳನ್ನು ಬಳಸುವ ಮೂಲಕ ಇತರರಿಗೆ ಪ್ರೇರಕರಾಗಬೇಕು ಎಂದರು.
ನೂತನ ಪದಾಧಿಕಾರಿಗಳಾದ ಎನ್.ಸಿ. ಮನೋವೆಂಕಟರಮಣ (ಸಂಘ- ಸಂಸ್ಥೆಗಳ ಪ್ರತಿನಿಧಿ), ಎಫ್.ಬಾಬಾಜಾನ್ (ಅಲ್ಪಸಂಖ್ಯಾತ ಘಟಕದ ಪ್ರತಿನಿಧಿ), ವಿ.ಗೋವಿಂದರಾಜು (ಗೌರವ ಕಾರ್ಯದರ್ಶಿ), ನರಸಿಂಹಮೂರ್ತಿ (ಪರಿಶಿಷ್ಟ ಜಾತಿ ಪ್ರತಿನಿಧಿ) ಇವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಪ್ರಗತಿಪರ ರೈತ ಧರ್ಮಪುರದ ಗೋವಿಂದಪ್ಪ, ಶಿಕ್ಷಕಿ ಸುಕನ್ಯಾ ಬೈರೇಗೌಡ ಹಾಗೂ ಪ್ರಾಂಶುಪಾಲ ಪ್ರದಿಪ್ ಅವರನ್ನು ಸನ್ಮಾನಿಸಲಾಯಿತು.