ಸಿಂದಗಿ ನಗರದಲ್ಲಿ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶಾಸಕ ಅಶೋಕ ಮನಗೂಳಿ ಬಿಡುಗಡೆಗೊಳಿಸಿದರು. ಹಾಸಿಂಪೀರ ವಾಲಿಕಾರ, ಎಂ.ಸಿ.ಪಟ್ಟಣಶೆಟ್ಟಿ, ವೈ.ಸಿ.ಮಯೂರ ಅಶೋಕ ಅಲ್ಲಾಪೂರ ಮತ್ತಿತರರಿದ್ದರು. 
ರಾಜ್ಯ

21ನೇ ಅಕ್ಷರ ಜಾತ್ರೆ ಯಶಸ್ವಿಗೊಳಿಸೋಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ ಮನಗೂಳಿ ಕರೆ
  • ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಸಿಂದಗಿ: ನಗರದ ಹೆಚ್.ಜಿ. ಕಾಲೇಜ್ ಆವರಣದಲ್ಲಿ ಜು.21 ಹಾಗೂ 22ರಂದು ಹಮ್ಮಿಕೊಂಡಿರುವ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಯನ್ನು ಕನ್ನಡಾಭಿಮಾನದ ಮೂಲಕ ಯಶಸ್ವಿಗೊಳಿಸೋಣ ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.
ನಗರದಲ್ಲಿ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಎಲ್ಲ ಭಾಷಾ ಸಾಹಿತ್ಯದಲ್ಲೂ, ಕನ್ನಡ ಸಾಹಿತ್ಯಕ್ಕೆ ಮೇರು ವ್ಯಕ್ತಿತ್ವವಿದೆ. ಕನ್ನಡಾಭಿಮಾನಿಗಳಾದ ನಾವುಗಳು ಸದಾ ಕನ್ನಡಾಭಿಮಾನ ಮೆರೆಯಬೇಕು. ಕನ್ನಡ ಜಾತ್ರೆಯನ್ನು ಹೆಮ್ಮೆಯಿಂದಲೇ ಆಸ್ವಾಧಿಸಿ, ನಮ್ಮ ತನು-ಮನ-ಧನದಿಂದಲೂ ಸೇವೆಗೈದಾಗ ಸಮ್ಮೇಳನ ಅಭೂತಪೂರ್ವವಾಗಿ ಹೊರಹೊಮ್ಮಬಲ್ಲದು. ಪರಸ್ಪರ ಕೈಜೋಡಿಸಿ ಕನ್ನಡಾಂಬೆ ಸೇವೆಯನ್ನು ಸಾರ್ಥಕಗೊಳಿಸೋಣ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಮ್ಮ ಹೆಮ್ಮೆ ಗುರುಗಳಾದ ಹ.ಮ.ಪೂಜಾರ ಅವರ ಸಾಹಿತ್ಯ ಸೇವೆ ಅನನ್ಯವಾಗಿದೆ. ಅವರ ಆಯ್ಕೆ ಸಾಹಿತ್ಯದ ತವರಾದ ಸಿಂದಗಿ ತಾಲೂಕಿಗೆ ಸಂದ ಗೌರವವಾಗಿದೆ. ಕಸಾಪ ಪದಾಧಿಕಾರಿಗಳು, ಸಮ್ಮೇಳನದ ಸಿದ್ಧತೆ ನಡೆಸುತ್ತಿದ್ದು, ಅವರೊಂದಿಗೆ ನಾವು ಮುಂದೆೆ ನಿಂತು ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ನಾಡು-ನುಡಿ-ನೆಲ-ಜಲವನ್ನು ರಕ್ಷಿಸುವುದು ಎಲ್ಲ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. 21ರಂದು ಸಾವಿರಾರು ಮಹಿಳೆಯರಿಂದ ಕುಂಭ ಮೆರವಣಿಗೆ ಮೂಲಕ ಸರ್ವಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಗುವುದು. 22ರಂದು ಭಾವೈಕ್ಯತೆ ಸಾರವನ್ನೊಳಗೊಂಡ ಬುತ್ತಿ ಜಾತ್ರೆಯೊಂದಿಗೆ ಜ್ಞಾನಪೀಠ ಪುರಸ್ಕೃತರ ಭವಚಿತ್ರ ಮೆರವಣಿಗೆಯಲ್ಲಿ ಶಿಕ್ಷಣ ತಜ್ಞರ, ವಿಶೇಷ ಯುವ ಪೀಳಿಗೆಯ ವಿಶಿಷ್ಟ ಗೋಷ್ಠಿಗಳು ನಡೆಯಲಿದ್ದು, ಸಾಹಿತ್ಯಾಸಕ್ತರು ಗೋಷ್ಠಿಗಳ ಪ್ರಯೋಜನ ಪಡೆಯಬೇಕು ಎಂದರು.
ಮಾಜಿ ಮಂತ್ರಿ ದಿ.ಎಂ.ಸಿ. ಮನಗೂಳಿ ಅವರ ಹೆಸರನ್ನು ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ. ಶಾಂತವೀರ ಪಟ್ಟಾಧ್ಯಕ್ಷರು ಸಿಂದಗಿ, ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಹೆಸರಿನ ಸಮ್ಮೇಳನದ ಮುಖ್ಯದ್ವಾರಗಳು ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯ ಸಾಧಕರ ಗೌರವ ಪ್ರತೀಕವಾಗಿ ಕನ್ನಡ ಮನಸ್ಸುಗಳನ್ನು ಸ್ವಾಗತಿಸಲಿವೆ. ಪುಸ್ತಕ ಮಳಿಗೆಗೆ ಡಾ.ಸಿಂಪಿ ಲಿಂಗಣ್ಣ, ದಾಸೋಹ ಮನೆಗೆ ಡಾ.ಜಯದೇವಿತಾಯಿ ಲಿಗಾಡೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಸಮ್ಮೇಳನದ ಕುರಿತು ಮಾಹಿತಿ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ವೈ.ಸಿ.ಮಯೂರ, ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಗೌರವ ಸಲಹೆಗಾರ ಅಶೋಕ ಗಾಯಕವಾಡ, ಗೌರವ ಕಾರ್ಯದರ್ಶಿ ಆನಂದ ಶಾಬಾದಿ, ಕೋಶಾಧ್ಯಕ್ಷೆ ಸುನಂದಾ ಯಂಪೂರೆ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಅಲ್ಲಾಪೂರ, ಮಲ್ಲಣ್ಣ ಸಾಲಿ, ಮಹಾಂತಗೌಡ ಪಾಟೀಲ, ಅಬ್ಬಾಸಲಿ ಯರಗಲ್ಲ, ಸಂದೀಪ ಚೌರ, ಶೈಲಾ ಸ್ಥಾವರಮಠ, ಜಯಶ್ರೀ ಕುಲಕರ್ಣಿ, ಸೈನಾಬಿ ಮಸಳಿ, ವರ್ಷಾ ಪಾಟೀಲ ಸೇರಿ ಪದಾಧಿಕಾರಿಗಳು ಇದ್ದರು.