ಬೀಳಗಿ ಪಟ್ಟಣ ಸಮೀಪದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮ ಸಮಾಜದ ನಿರ್ಮಾಣ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿಗಳು, ಸಾಧಕರಿಗೆ ಸನ್ಮಾನ ಮಾಡಲಾಯಿತು. ಶಾಸಕ ಜೆ.ಟಿ.ಪಾಟೀಲ, ಬಸವಪ್ರಭು ಸರನಾಡಗೌಡ, ತಹಸೀಲ್ದಾರ್ ವಿನೋದ ಹತ್ತಳ್ಳಿ, ಹಣಮಂತ ಕಾಖಂಡಕಿ ಇತರರಿದ್ದರು.
- ಶಾಸಕ ಜೆ.ಟಿ. ಪಾಟೀಲ ಅಭಿಮತ
- ಸಮ ಸಮಾಜ ನಿರ್ಮಾಣ ವಿಚಾರ ಸಂಕಿರಣ
ಬೀಳಗಿ: ಬಸವ, ಬಾಬಾ ಸಾಹೇಬ್ ಅಂಬೇಡ್ಕರ, ಬುದ್ಧನಿಂದ ಹಿಡಿದು ಅನೇಕರು ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಸಮಾಜದಲ್ಲಿ ಬೇರೂರಿರುವ ಜಾತಿಯ ಪಿಡುಗು ನಿರ್ಮೂಲನೆಯಾಗುತ್ತಿಲ್ಲ. ಜಾತಿ ಹೋಗಲಾಡಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಪಟ್ಟಣ ಪಟ್ಟಣ ಸಮೀಪದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಜಿಲ್ಲಾ ಸಮಿತಿ ವತಿಯಿಂದ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಸಮ ಸಮಾಜದ ನಿರ್ಮಾಣ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಂದಾಜು ಎಂಟು ನೂರು ವರ್ಷಗಳ ಹಿಂದೆಯೇ ಬಸವಣ್ಣನವರು ಕಾಯಕ, ದಾಸೋಹ, ಸೀ ಸಮಾನತೆ ಮತ್ತು ಶೋಷಿತ ಸಮುದಾಯದ ಕಲ್ಯಾಣಕ್ಕಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಅಂದಿನ ಕಾಲದಲ್ಲಿ ಪೂರ್ವಿಕರ ವೃತ್ತಿ ಆಧರಿಸಿ ಜಾತಿಗಳನ್ನು ಗುರುತಿಸಲಾಗುತ್ತಿತ್ತು. ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ದೇಶಕ್ಕೆ ಶ್ರೇಷ್ಟ ಸಂವಿಧಾನ ನೀಡುವ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದಾರೆ ಎಂದರು.
ಕಲಬುರ್ಗಿ ಪ್ರಗತಿಪರ ಚಿಂತಕರು ರಂಜಾನ ದರ್ಗಾ ಉಪನ್ಯಾಸ ನೀಡಿ, ಬಸವಣ್ಣನವರು ದುಡಿಯುವ ವರ್ಗ ಸಂಘಟಿಸಿ ಕಾಯಕ ಕ್ರಾಂತಿ ನಡೆಸಿದವರು. ಆದರೆ ಇಂದು ಬುದ್ಧ, ಬಸವ ಮತ್ತು ಅಂಬೇಡ್ಕರ ಅವರ ಪ್ರಗತಿಪರ ತತ್ವಗಳನ್ನು ದುರ್ಬಲಗೊಳಿಸಲು ವ್ಯವಸ್ಥಿತ ಶಕ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ತಿಳಿಸಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಅವರನ್ನು ಆಧುನಿಕ ಬಸವಣ್ಣ ಎಂದೇ ಕರೆಯಲಾಗುತ್ತದೆ. ಅವರು ನಮಗೆ ಪ್ರಬಲವಾದ ಸಂವಿಧಾನ ನೀಡಿ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಸಮಾಜದಲ್ಲಿ ಸಮಾನತೆ, ಭಾವೈಕ್ಯ ಹಾಗೂ ಏಕತೆ ಉಳಿಸಿಕೊಂಡು ಬಂದಿರುವ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು. ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಸವರಾಜ ಹಳ್ಳದಮನಿ ಅಧ್ಯಕ್ಷತೆ ವಹಿಸಿದ್ದರು. ಪರಶುರಾಮ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಹಸೀಲ್ದಾರ ವಿನೋದ ಹತ್ತಳ್ಳಿ, ಸಿಪಿಐ ಹಣಮಂತ ಸಣಮನಿ, ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಶ್ರೀಶೈಲ ಸುಳಿಕೇರಿ, ಸಿದ್ದು ಸಾರಾವರಿ, ಕಾಶಿಂ ಅಲಿ ಗೊಠೆ, ರಮೇಶ ಅನಗವಾಡಿ ಇದ್ದರು.