ಬೀದಿನಾಯಿ ಹಾವಳಿಗೆ ಕಡಿವಾಣ ಬೀಳಲಿ dog 
ರಾಜ್ಯ

ಬೀದಿನಾಯಿ ಹಾವಳಿಗೆ ಕಡಿವಾಣ ಬೀಳಲಿ dog

ಪ್ರಮುಖ ಮುಖ್ಯಾಂಶಗಳು

  • ಮುಳಬಾಗಿಲಿನಿ ಮುತ್ಯಾಲಪೇಟೆ ನಿವಾಸಿಗಳಿಂದ ನಗರಸಭೆ ಪೌರಾಯುಕ್ತರಿಗೆ ಮನವಿ
ಮುಳಬಾಗಿಲು: ನಗರದ ಬಿಇಒ ಕಚೇರಿ ಹಿಂಭಾಗದ ಮುತ್ಯಾಲಪೇಟೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಮೇಲೆ ದಾಳಿ ವಾಡುತ್ತಿವೆ. ನಗರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪೌರಾಯುಕ್ತ ವಿ. ಶ್ರೀಧರ್‌ಗೆ ಮನವಿ ಸಲ್ಲಿಸಿದರು. dog
ಮಕ್ಕಳ ಸುರಕ್ಷತೆಯೇ ಪಾಲಕರಿಗೆ ಸವಾಲಾಗಿದೆ. ಆದರೆ, ಈ ಬಗ್ಗೆ ನಗರಸಭೆ ನಿರ್ಲಕ್ಷ್ಯವಹಿಸಿದೆ. ಬೀದಿನಾಯಿಗಳಿಗೆ ಈ ಭಾಗದ ಮಹಿಳೆಯೊಬ್ಬರು ಆಹಾರ ಹಾಕುತ್ತಿರುವ ಕಾರಣ ಗುಂಪು ಗುಂಪಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಮಕ್ಕಳು, ವೃದ್ಧರು ಈ ರಸ್ತೆಯಲ್ಲಿ ಸಂಚರಿಸಲು ಭೀತಿಗೊಳ್ಳುತ್ತಿದ್ದಾರೆ. ತಕ್ಷಣವೇ ನಗರಸಭೆ ಆಡಳಿತ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮುತ್ಯಾಲಪೇಟೆ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಶಾಲೆ ಹಾಗೂ ಮನೆಗಳಿಗೆ ಸಂಚರಿಸುವ ಸಣ್ಣ ಮಕ್ಕಳು ಭೀತಿಗೊಂಡಿದ್ದಾರೆ. ಮುತ್ಯಾಲಪೇಟೆಯಲ್ಲಿರುವ ಬಿಇಒ ಕಚೇರಿ ಹಿಂಭಾಗದ ರಸ್ತೆಯ ನಿವಾಸಿಯೊಬ್ಬರು ಹತ್ತಾರು ಬೀದಿನಾಯಿಗಳನ್ನು ಸಾಕುತ್ತಿದ್ದಾರೆ. ನೆರೆಹೊರೆಯವರು ತಿಳಿ ಹೇಳಿದರೂ ಸ್ಪಂದಿಸುತ್ತಿಲ್ಲ. ಇದೇ ರೀತಿ ಕೆ.ಬೈಯಪಲ್ಲಿ ರಸ್ತೆಯಲ್ಲಿ ಬೀದಿನಾಯಿಗಳ ದಂಡೇ ಇದೆ. ಮಕ್ಕಳು ಬೀದಿಗೆ ಕಾಲಿಡಲು ಭಯಪಡುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಗರಸಭೆಯ ಸೂಕ್ತ ಮೇಲ್ವಿಚಾರಣೆ ಇಲ್ಲದ ಕಾರಣಮುತ್ಯಾಲಪೇಟೆ ಕೆ.ಬೈಯಪಲ್ಲಿ ರಸ್ತೆಯಲ್ಲಿ ಚಿಕನ್ ಹಾಗೂ ಮಟನ್ ಅಂಗಡಿಗಳು ಸಾಕಷ್ಟಿವೆ. ಅಂಗಡಿಗಳಿಂದ ಎಸೆಯುವ ಕೋಳಿ ತ್ಯಾಜ್ಯ ಬೀದಿನಾಯಿಗಳಿಗೆ ಆಹಾರವಾಗುತ್ತಿದೆ. ಇದರಿಂದ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ದಾಳಿಗೆ ಮುಂದಾಗುವ ಭೀತಿಯೂ ಹೆಚ್ಚಿದೆ. ಈ ಕುರಿತಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಕ್ಕಳ ಪಾಲಕರಾದ ಅಮರನಾಥ್, ಮಧುಸೂಧನ್, ಗ್ಯಾಸ್ ರು, ರಾಜೇಶ್,ಯೂಸಬ್ ಸಾಬ್, ಚೋಕ್ಕೆಗೌಡ, ಮಂಜುಳಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.