ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಮತ್ತು ಜಾಗೃತಿ ಕುರಿತು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಗದೀಶ ಕೆ., ರಘುವೀರ ಕುಲಕರ್ಣಿ, ಸಂಜೀವ ಬೆಂಟೂರ ಮತ್ತಿತರರಿದ್ದಾರೆ. 
ರಾಜ್ಯ

ಕುಟುಂಬದಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಲಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ ಕೆ. ಅನಿಸಿಕೆ
ವಿಜಯಪುರ : ಕುಟುಂಬದಲ್ಲಿ ದೌರ್ಜನ್ಯವನ್ನು ತಡೆಗಟ್ಟಲು ಹೊಸ ತಲೆಮಾರಿನೊಂದಿಗೆ ಹೊಂದಾಣಿಕೆ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಬೇಕು ಮತ್ತು ಪರಸ್ಪರ ಸಹಕಾರದಿಂದ ಕುಟುಂಬವನ್ನು ಸದೃಢವಾಗಿರಿಸಬೇಕು ಎಂದು ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ ಕೆ ಸಲಹೆ ನೀಡಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಹಿರಿಯ ನಾಗರಿಕರ ವೈದ್ಯಕೀಯ ವಿಭಾಗದ ವತಿಯಿಂದ ಮಂಗಳವಾರ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಎಲ್‌ಡಿಇ ಡೀಮ್ಡ್ ವಿವಿ ಕಾನೂನು ಶಾಲೆಯ ಪ್ರಾಚಾರ್ಯ ರಘುವೀರ ಕುಲಕರ್ಣಿ ಹಿರಿಯ ನಾಗರಿಕರ ಹಕ್ಕುಗಳು ಮತ್ತು ಅವರ ರಕ್ಷಣೆಗಾಗಿ ಜಾರಿಯಲ್ಲಿರುವ ವಿವಿಧ ಕಾನೂನುಗಳ ಕುರಿತು ಮಾಹಿತಿ ನೀಡಿ, ಹಿರಿಯರು ತಮ್ಮ ಇಚ್ಛಾಪತ್ರವನ್ನು ಸೂಕ್ತವಾಗಿ ರಚಿಸಿ ಸುರಕ್ಷಿತವಾಗಿ ಇಡಬೇಕು. ಜೀವಿತಾವಧಿಯಲ್ಲಿಯೇ ತಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸದಿರುವುದು ಒಳಿತು ಎಂದು ಸಲಹೆ ನೀಡಿದರು.

ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸಂಜೀವ ಬೆಂಟೂರ ಮಾತನಾಡಿ, ಹಿರಿಯ ನಾಗರಿಕರಿಗೆ ಆಸ್ಪತ್ರೆಯಲ್ಲಿ ಅಗತ್ಯವಿರುವ ಎಲ್ಲ ವೈದ್ಯಕೀಯ ಮತ್ತು ಸಲಹಾ ಸೇವೆಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ನಾಗರಿಕರ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಆನಂದ ಅಂಬಲಿ ಹಿರಿಯರ ಮೇಲಿನ ದೌರ್ಜನ್ಯವು ಅವರ ಮಾನಸಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ವಿವರಿಸಿ, ದೌರ್ಜನ್ಯಕ್ಕೆ ಒಳಗಾದ ಹಿರಿಯರಿಗೆ ವೃದ್ಧಾಪ್ಯದ ವೈದ್ಯಕೀಯ ವಿಭಾಗದಲ್ಲಿ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಆರೋಗ್ಯ ಸಲಹೆ ಮತ್ತು ಅಗತ್ಯ ಮಾರ್ಗದರ್ಶನ ನಿರಂತರವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಕುರಿತು ಆಯೋಜಿಸಿದ್ದ ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದ ಎಂ.ಕೆ. ಹಿರ್ಯಾಳ, ಅನುಪಮಾ ಸಿನ್ಹಾ, ಅಂಜಲಿ ವರ್ಮಾ ಹಾಗೂ ದಾನಮ್ಮ ಅರಳಿ ಅವರನ್ನು ಸನ್ಮಾನಿಸಲಾಯಿತು.