ದೇವಲಗಾಣಗಾಪುರಕ್ಕೆ ಎಸ್​ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ ಹಲ್ಲೆ ಬಗ್ಗೆ ಮಾಹಿತಿ ಪಡೆದರು. ಡಿವೈಎಸ್​ಪಿ ತಮ್ಮಾರಾಯಗೌಡ ಪಾಟೀಲ್​ ಇತರರಿದ್ದರು.  
ರಾಜ್ಯ

ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಪ್ರಮುಖ ಮುಖ್ಯಾಂಶಗಳು

  • ದೇವಲಗಾಣಗಾಪುರದಲ್ಲಿ ನಸುಕಿನ ಜಾವ ಘಟನೆ
  • ಸಾವು-ಬದುಕಿನ ಮಧ್ಯೆ ಯುವಕ ಹೋರಾಟ
ಅಫಜಲಪುರ: ಯುವಕನೊಬ್ಬನನ್ನು ಮಾರಾಕಾಸಗಳಿಂದ ಕೊಚ್ಚಿ ಭೀಕರ ಹಲ್ಲೆ ಮಾಡಿದ ಟನೆ ದೇವಲಗಾಣಗಾಪುರ ಸಂಗಮ ಕ್ಷೇತ್ರದ ಅವಧೂತ ಆಶ್ರಮ ಬಳಿ ಶುಕ್ರವಾರ ನಸುಕಿನ ಜಾವ ನಡೆದಿದೆ. ಈ ಟನೆ ಭೀಮಾ ತೀರದ ಜನತೆಯನ್ನು ಬೆಚ್ಚೀಬಿಳಿಸಿದೆ.
ಆಟೋ ಚಾಲಕ ದತ್ತು ಖರ್ಚಿ (19) ತೀವ್ರ ಗಾಯಗೊಂಡವ. ಪ್ರೀತಮ್​ ಹೊಸಮನಿ ಹಾಗೂ ಪ್ರಜ್ವಲ್​ ಹೊಸಮನಿ ಹಲ್ಲೆಗೈದವರು ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ದತ್ತು ಖರ್ಚಿ ನಸುಕಿನ ಜಾವ 2ಕ್ಕೆ ಆಟೋದಲ್ಲಿ ಸ್ಟೇಷನ್​ ಗಾಣಗಾಪುರದಿಂದ ಯಾತ್ರಿಕರನ್ನು ಸಂಗಮಕ್ಕೆ ಬಿಟ್ಟು ಮರಳಿ ಬರುವಾಗ ಪ್ರೀತಮ್​ ಮತ್ತು ಪ್ರಜ್ವಲ್​ ಅಡ್ಡಗಟ್ಟಿದ್ದಾರೆ. ಬಳಿಕ ಆಶ್ರಮದವರೆಗೆ ಅಟ್ಟಾಡಿಸಿಕೊಂಡು ಹೋಗಿ ಮಾರಕಾಸಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದತ್ತುನನ್ನು ತಕ್ಷಣ ಪೊಲೀಸರು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಮಹೇಶ ಮೇಣ್ಣನವರ್​, ಡಿವೈಎಸ್​ಪಿ ತಮ್ಮಾರಾಯಗೌಡ ಪಾಟೀಲ್​, ಸಿಪಿಐ ಲಖನ್​ ಮಸಗುಪ್ಪಿ, ಕೆಂ ಪಿಎಸ್​ಐ ಶ್ರೀದೇವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ದೇವಲಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರಾಯಿಸಿ ನೋಡಿದ್ದಕ್ಕೆ ಹಲ್ಲೆ
ಪ್ರಸಿದ್ಧ ಯಾತ್ರಾ ಸ್ಥಳ ದೇವಲಗಾಣಗಾಪುರದಲ್ಲಿ ಕೇವಲ "ದಿಟ್ಟಿಸಿ ನೋಡಿದ' ಎಂಬ ಕಾರಣಕ್ಕೆ ಟಂ&ಟಂ ಚಾಲಕ 19 ವರ್ಷದ ದತ್ತು ಎಂಬಾತನ ಮೇಲೆ ಮಾರಕಾಸಗಳಿಂದ ಭೀಕರ ಹಲ್ಲೆ ಮಾಡಲಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ನಮ್ಮ ಅಕೌಂಟ್​ ನೋಡಿದ್ದು, ಎದುರು ಸಿಕ್ಕಾಗ ಗುರಾಯಿಸಿ ನೋಡುತ್ತಿಯಾ ಎಂದು ಧಮ್​ಕಿ ಹಾಕಿ ಹಲ್ಲೆಗೈದಿದ್ದಾರೆ. ಯುವಕ ಸಾಕಷ್ಟು ಬೇಡಿಕೊಂಡರೂ ದಾಳಿ ನಿಲ್ಲಿಸದಿರುವ ವಿಡಿಯೋ ವೈರಲ್​ ಆಗಿದ್ದು, ಗ್ರಾಮಸ್ಥರು ಹಾಗೂ ಯಾತ್ರಿಕರಲ್ಲಿ ಭಯ ಹುಟ್ಟಿಸಿದೆ.
ಅಪರಾಧ ಹೆಚ್ಚಿಸುತ್ತಿರುವ ನಶೆ
ದೇವಲಗಾಣಗಾಪುರದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದ್ದು, ಬೇರೆ ಪ್ರದೇಶದಿಂದ ಗಾಂಜಾ, ಕೊರೆಕ್ಸ್​, ಮಾತ್ರೆ ಹಾಗೂ ಇಂಜನ್​ಗಳು ಕ್ಷೇತ್ರ ಸೇರುತ್ತಿವೆ. ಇದಕ್ಕೆ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದು, ನಶೆಯಲ್ಲೇ ಬೆಳಗ್ಗಿನ ಜಾವ ದತ್ತ ಮಹಾರಾಜರ ದರ್ಶನಕ್ಕೂ ಬರುತ್ತಿದ್ದಾರೆ. ಅಲ್ಲದೆ ಸಾಕಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳುತ್ತಾರೆ ಸ್ಥಳಿಯರು.
ಕುಟುಂಬಕ್ಕೆ ದತ್ತನೇ ಆಸರೆ
ಮಾರಣಾಂತಿಕ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಸಾವು&ನೋವಿನ ಮಧ್ಯೆ ಹೋರಾಡುತ್ತಿರುವ ಯುವಕ ದತ್ತು ಖರ್ಚಿ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ. ದತ್ತು ಮೂಲತ@ ಮಾಗಣಗೇರಿ ಗ್ರಾಮದವನಾಗಿದ್ದು, ಚಿಕ್ಕವನಿದ್ದಾಗಲೆ ತಾಯಿ ಮೃತಪಟ್ಟಿದ್ದಳು. ಅಮ್ಮನ ಮರಣದ ನಂತರ ಸೋದರಮಾವ ದತ್ತನನ್ನು ದೇವಲಗಾಣಗಾಪುರಕ್ಕೆ ಕರೆದುಕೊಂಡು ಬಂದಿದ್ದ. ತಂದೆ ಮಹಾರಾಷ್ಟ್ರದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹೋದರನೊಬ್ಬ ಬಾಳೆಹಣ್ಣು ಮಾರಾಟ ಮಾಡುತ್ತಾ ಜೀವನ ನಡಸುತ್ತಿದ್ದಾನೆ. ದತ್ತ ಆಟೋ ಚಲಾಯಿಸುವ ಮೂಲಕ ಕುಟುಂಬದ ನೊಗ ಸಾಗಿಸುತ್ತಿದ್ದ.
ಘಟನೆ ಹಿನ್ನೆಲೆ
ಕಳೆದ ಭಾನುವಾರ ದೇವಲಗಾಣಗಾಪುರದಿಂದ ಸಂಗಮದ ಮಾರ್ಗ ಮಧ್ಯದ ರಸ್ತೆಯಲ್ಲಿ ಆರೋಪಿಗಳಾದ ಪ್ರಜ್ವಲ್​ ಹಾಗೂ ಪ್ರೀತಮ್​ ಮರದ ತುಂಡನ್ನು ಹಾಕಿದ್ದರು. ಇದೇ ವೇಳೆ ಆಟೋದಲ್ಲಿ ಯಾತ್ರಿಕರನ್ನು ಕರೆದುಕೊಂಡು ಹೋಗುತ್ತಿದ್ದ ದತ್ತು, ಮರದ ತುಂಡನ್ನು ತೆಗೆದು ಹಾಕಿದ್ದ. ಅಲ್ಲದೆ ರೋಡ್​ ಬಂದ್​ ಮಾಡ್ತೀರಿ ಏನು ಎಂದು ಆರೋಪಿಗಳಿಗೆ ಕೇಳಿದ್ದ. ಈ ವೇಳೆ ನಿನಗೆ ನೋಡಿಕೊಳ್ಳುತ್ತೇವೆ ಎಂದು ಪ್ರೀತಮ್​, ಪ್ರಜ್ವಲ್​ ಧಮ್ಕಿ ಹಾಕಿದ್ದರು. ಇದಾದ 6 ದಿನಗಳಲ್ಲಿಯೇ ಏಕಾಏಕಿ ದಾಳಿ ಮಾಡಿ ನಮಗೆ ಎದುರು ಮಾತಾಡ್ತಿ ಎಂದು ಹಲ್ಲೆ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.