ಕಲಬುರಗಿಯಲ್ಲಿ ಆಯೋಜಿಸಿದ್ದ ಎನ್ವಿ ಸಂಸ್ಥೆ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ಚಿಣ್ಣರು ದೀಪ ಬೆಳಗಿ ಉದ್ಘಾಟಿಸಿದರು. ಡಾ.ಎನ್.ಜಿ.ಕಣ್ಣೂರ್, ಡಾ.ಸಂಪತಕುಮಾರ ಲೋಯಾ, ಡಾ.ಗೌತಮ್ ಜಹಾಗೀರದಾರ, ಅಭಿಜಿತ ದೇಶಮುಖ, ಬಿ.ಜಿ.ಜಾಜಿ, ಸುಧಾ ಕರಲಗೀಕರ್, ಸುಹಾಸ ಖಣಗೆ ಇತರರಿದ್ದರು.
- ಡಾ.ಎನ್.ಜಿ.ಕಣ್ಣೂರ್ ಅನಿಸಿಕೆ
- ಎನ್ವಿ ಸಂಸ್ಥೆಯ 120ನೇ ಸಂಸ್ಥಾಪನಾ ದಿನ
ಕಲಬುರಗಿ: ಶಿಸ್ತು, ಬದ್ಧತೆ, ಶ್ರದ್ಧೆ ಹಾಗೂ ಸಂಸ್ಕೃತಿಯೊಂದಿಗೆ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಜಿ.ಕಣ್ಣೂರ್ ಹೇಳಿದರು.
ರಾಮೇಶ್ವರ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ನೂತನ ವಿದ್ಯಾಲಯ ಸಂಸ್ಥೆಯ 120ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಈ ವಿದ್ಯಾ ಸಂಸ್ಥೆ ಅತ್ಯಂತ ಹಳೆಯದಾಗಿದ್ದು, ಶಿಸ್ತುಬದ್ಧವಾಗಿ ಮಕ್ಕಳಿಗೆ ವಿದ್ಯೆ ನೀಡುತ್ತಿದೆ. ಇಲ್ಲಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನೂ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಇಲ್ಲೇ ಎರಡು ವರ್ಷ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಇಂದು ಒಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಹುದ್ದೆವರೆಗೂ ಬೆಳೆದು ನಿಂತಿದ್ದೇನೆ. ಹೀಗಾಗಿ ಈ ಸಂಸ್ಥೆಯಿಂದ ತುಂಬಾ ಕಲಿತಿದ್ದೇನೆ. ನನ್ನ ಬೆಳವಣಿಗೆಯಲ್ಲಿ ಈ ಸಂಸ್ಥೆಯ ಕೊಡುಗೆ ಅಪಾರ ಎಂದು ಸ್ಮರಿಸಿದರು.
ವಿದ್ಯಾರ್ಥಿ-ಶಿಕ್ಷಕರ ಬಾಂಧವ್ಯ
ಈ ಸಂಸ್ಥೆಯಲ್ಲಿ ತಾವು ಅಧ್ಯಯನ ಮಾಡುವಾಗ ಶಿಕ್ಷಕರು ತುಂಬಾ ಖಡಕ್ ಆಗಿದ್ದರು. ಪಾಠ ಮಾಡುವುದರಲ್ಲೂ ಎತ್ತಿದ ಕೈ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಮಕ್ಕಳಲ್ಲಿ ಕಲಿಯಬೇಕು ಎಂಬ ಹಂಬಲವೂ ಇತ್ತು. ಆಸಕ್ತಿದಾಯಕ ಸಂಗತಿಗಳೊಂದಿಗೆ ಶಿಕ್ಷಕರು ರಚನಾತ್ಮಕವಾಗಿ ಪಾಠ ಮಾಡುತ್ತಿದ್ದರು. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಹೊರಹೊಮ್ಮಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ ಆದ ಖ್ಯಾತ ವೈದ್ಯ ಡಾ.ಸಂಪತ್ಕುಮಾರ ಲೋಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 1907ರಲ್ಲಿ ಪ್ರಾರಂಭವಾದ ಈ ವಿದ್ಯಾಸಂಸ್ಥೆ ಮಕ್ಕಳ ಬಗ್ಗೆ ಅಪಾರ ಕಾಳಜಿಯೊಂದಿಗೆ ಬೆಳೆದಿದೆ. ಕ್ರೀಡೆ, ಸಂಗೀತ, ಸಾಹಿತ್ಯಕ್ಕೆ ಪ್ರಾಮುಖ್ಯತೆ ನೀಡಿದೆ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ.ಗೌತಮ್ ಜಹಾಗೀರದಾರ್ ಮಾತನಾಡಿ, ನಾಡಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದ ಎನ್ವಿ ಸಂಸ್ಥೆ ಇದೀಗ ಎಲ್ಲೋ ಒಂದು ಕಡೆ ಕುಂಠಿತಗೊಳ್ಳುತ್ತಿದೆ ಎಂದು ವಿಷಾದಿಸಿದ ಅವರು, ಮಕ್ಕಳಿಗೆ ಸಂಸ್ಥೆಯ ಇತಿಹಾರ ಹೇಳಿಕೊಡುವಲ್ಲಿ ನಾವು ಎಲ್ಲೋ ಎಡವಿದ್ದೇವೆ ಎಂದು ಹೇಳಿದರು.
ಸಂಗೀತ ವಿಭಾಗದ ಮಹೇಶ ಬಡಿಗೇರ ತಂಡ ನಾಡಗೀತೆ, ವಂದೇ ಮಾತರಂ ಹಾಡಿದರು. ಸಂಸ್ಥೆಯ ವಿವಿಧ ಶಾಲೆ, ಕಾಲೇಜುಗಳ ವಿವಿಧ ಕೋರ್ಸ್ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸತ್ಕರಿಸಲಾಯಿತು.
ಸಂಸ್ಥೆ ಕಾರ್ಯದರ್ಶಿ ಅಭಿಜಿತ್ ದೇಶಮುಖ ಸ್ವಾಗತಿಸಿದರು. ಬಿಇಡಿ ಕಾಲೇಜಿನ ಉಪನ್ಯಾಸಕ ಮಹೇಶ ಜೋಶಿ ಮತ್ತು ಅಕ್ಕನಾಗಮ್ಮ ಅತಿಥಿ ಪರಿಚಯ ಮಾಡಿದರು. ಪ್ರಾಂಶುಪಾಲ ಶಿವಕುಮಾರ ಸ್ಥಾವರಮಠ್ ವಂದಿಸಿದರು.
ಉಪಾಧ್ಯಕ್ಷರಾದ ಬಿ.ಜಿ.ದೇಶಪಾಂಡೆ, ಡಾ.ಎಸ್.ಎಸ್.ಸಿದ್ದಾಪೂರಕರ್, ಸುಧಾ ಕರಲಗೀಕರ್, ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಿ.ಜಿ.ಜಾಜಿ, ಕೋಶಾಧ್ಯಕ್ಷ ಆನಂದ ಆಪ್ಟೆ, ಕಾರ್ಯದರ್ಶಿ ರವೀಂದ್ರ ಟೇಂಗಳಿ, ಕ್ರೀಡಾ ಸಮಿತಿ ಅಧ್ಯಕ್ಷ ಸುಹಾಸ ಖಣಗೆ, ಬಿಇಡಿ ಕಾಲೇಜಿನ ಉಪನ್ಯಾಸಕ ಡಾ.ಭರತ್ಕುಮಾರ ಸೇರಿ ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರರು, ಸಿಬ್ಬಂದಿ, ಪಾಲಕರು, ಗಣ್ಯರು ಭಾಗವಹಿಸಿದ್ದರು.
"
ವಿದ್ಯಾಸಂಸ್ಥೆ ನಮಗೇನು ನೀಡಿದೆ ಎಂದು ಪ್ರಶ್ನಿಸುವುದಕ್ಕಿಂತ ಈ ಸಂಸ್ಥೆಗೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಎನ್ವಿ ಸಂಸ್ಥೆ ಕ್ರೀಡಾ ಚಟುವಟಿಕೆಗೂ ತುಂಬಾ ಆದ್ಯಕ್ಷತೆ ನೀಡಿದೆ. ಇಂದಿನ ದಿನಗಳಲ್ಲಿ ಪಠ್ಯದೊಂದಿಗೆ ಕ್ರೀಡೆ ಇನ್ನಿತರ ಪಠ್ಯೇತರ ಚಟುವಟಿಕೆಗೂ ಪ್ರಾಧಾನ್ಯತೆ ನೀಡುವುದು ಅಗತ್ಯ.
— ಡಾ.ಎನ್.ಜಿ.ಕಣ್ಣೂರ್, ಕುಲಸಚಿವ (ಮೌಲ್ಯಮಾಪನ), ಗುಲ್ಬರ್ಗ ವಿವಿ.