ಸಾಂದರ್ಭಿಕ ಚಿತ್ರ  
ರಾಜ್ಯ

ಮಕ್ಕಳಲ್ಲಿ ಅರಿವು ಮೂಡಿಸೋಣ

ನಿರುಪಾದಿ ಬ್ಯಾಡಗಿ

ಬೆಳೆಯುತ್ತಿರುವ ಮಕ್ಕಳೂ ಹಾಗೇ. ತಾಯಿ-ತಂದೆಯ ಕಣ್ಣಳತೆಯಿಂದ ಅಥವಾ ಸುಪರ್ದಿಯಿಂದ ತಪ್ಪಿಸಿಕೊಂಡರೆ ಸಾಕು, ಅವರು ಆಡಿದ್ದೇ ಆಟ. ಆ ಕ್ಷಣಕ್ಕೆ ಏನು ಅನಿಸುತ್ತೋ ಅದನ್ನು ಮಾಡುತ್ತಾರೆ. ಆಳದ ಅರಿವಿಲ್ಲದೆ ನೀರಿನಲ್ಲಿ ಆಡಲು ಹೋಗುತ್ತಾರೆ. ಆಗ ತಾಯಿಯೋ, ತಂದೆಯೋ ‘ಮಗೂ ನೀರಿಗಿಳಿಯಬೇಡ, ಮುಳುಗಿ ಹೋಗಬಹುದು’ ಎಂದು ಎಚ್ಚರಿಕೆ ಜತೆಗೆ ಅರಿವನ್ನೂ ಮೂಡಿಸುತ್ತಾರೆ. ತಾಯಿಗೆ ಅಡುಗೆ, ಮನೆವಾರ್ತೆಯ ಜತೆಗೆ ಮಕ್ಕಳನ್ನು ನೋಡಿಕೊಳ್ಳುವುದೇ ಹರಸಾಹಸದ ಕೆಲಸ. ಮಕ್ಕಳಿಗೆ ಬುದ್ಧಿ ಬರುವವರೆಗೂ ಸಾಕಷ್ಟು ತಿಳಿಹೇಳಿ, ಲೋಕಜ್ಞಾನದ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಇರಬೇಕಾಗುತ್ತದೆ.

ಇತ್ತೀಚೆಗೆ ಒಂದು ಕಾರ್ಯ ಕ್ರಮದಲ್ಲಿ ಭಾಷಣಕಾರರೊಬ್ಬರು ಮಕ್ಕಳು ತಪ್ಪು ದಾರಿ ಹಿಡಿಯಲು ಹೆತ್ತವರು ಹೇಗೆ ಕಾರಣರಾಗುತ್ತಾರೆ ಎಂದು ಮಹಾಭಾರತದ ಕತೆಯನ್ನು ಆಧರಿಸಿ ಹೇಳುತ್ತಿದ್ದರು. ಧೃತರಾಷ್ಟ್ರ ಹುಟ್ಟು ಕುರುಡ. ಆತನ ಪತ್ನಿ ಗಾಂಧಾರಿ, ತನ್ನ ಗಂಡ ಕಾಣದ ಲೋಕವನ್ನು ತಾನೂ ಕಾಣಬಾರದೆಂದು ಸ್ವಯಂಪ್ರೇರಿತವಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು. ಪರಿಣಾಮವಾಗಿ ತಮ್ಮ ಮಕ್ಕಳು ತಪ್ಪು, ಸರಿ ಅಥವಾ ಏನೇ ಮಾಡಿದರೂ ಆ ತಂದೆತಾಯಿಯ ದೃಷ್ಟಿಗೆ ಬೀಳುತ್ತಿರಲಿಲ್ಲ. ಅಂದರೆ ಗಮನಕ್ಕೆ ಬರುತ್ತಿರಲಿಲ್ಲ. ಹೀಗೆ ಮಕ್ಕಳು ಚಿಕ್ಕಪ್ಪ, ದೊಡ್ಡಪ್ಪ, ಮಾವ ಇಲ್ಲವೇ ಆಯಾಗಳ ಆರೈಕೆಯಲ್ಲಿ ಬೆಳೆದರು. ತಿದ್ದಿ, ಬುದ್ಧಿ ಹೇಳಲು ಮಹಾರಾಜರ ಮಕ್ಕಳು ಎಂಬ ಭಯ. ಹೀಗೆ ಮಕ್ಕಳು ತಮ್ಮಿಷ್ಟದಂತೆ, ಸ್ವೇಚ್ಛೆಯಿಂದ ಬೆಳೆದರು. ವಯಸ್ಸಿಗೆ ಬಂದಾಗ ಅವರ ಬುದ್ಧಿ ತಿದ್ದಿಕೊಳ್ಳದಿರುವಷ್ಟು ಬಲಿತಿತ್ತು. ಪಾಂಡವ-ಕೌರವರಿಗೆ ಶಿಕ್ಷಕರು ಒಬ್ಬರೇ ಆದರೂ ಕೌರವರು ಕಲಿತದ್ದು ಅನ್ಯಾಯ, ಅಧರ್ಮ. ಪಾಂಡವರು ಕಲಿತದ್ದು, ನ್ಯಾಯ-ಧರ್ಮ. ಅಂದರೆ ಯಾವುದೇ ಸಂಸ್ಕಾರ, ಅರಿವು, ಮಾರ್ಗದರ್ಶನ ಬಾಲ್ಯದಲ್ಲಿಯೇ ಮನೆಯಿಂದಲೇ ಆರಂಭವಾಗಬೇಕು ಎಂದು ಅವರು ಹೇಳುತ್ತಿದ್ದರು.

ಇಂದು ಮಕ್ಕಳಿಗೆ ಇಂಜಿನಿಯರ್, ಡಾಕ್ಟರ್, ಐಐಟಿ, ಐಎಎಸ್ ಎಂದೆಲ್ಲ ದೊಡ್ಡ ಹುದ್ದೆಯ, ಹೆಚ್ಚಿನ ಸಂಬಳದ ಉದ್ಯೋಗ ಪಡೆಯುವ ದೃಷ್ಟಿಯಿಂದ ಶಿಕ್ಷಣ ನೀಡುವ ಕಾಲದಲ್ಲಿದ್ದೇವೆ. ಅದು ಅಗತ್ಯವೂ ಹೌದು. ಆದರೆ ಆ ಶಿಕ್ಷಣದ ಜತೆಗೆ ಒಳಿತು ಕೆಡುಕುಗಳ ಅರಿವು ಮೂಡಿಸಬೇಕಾದ, ಮೌಲ್ಯಗಳನ್ನು ತಿಳಿಸಿಕೊಡಬೇಕಾದ ಅಗತ್ಯವಿದೆ. ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿವೇಕ, ಸಂಬಂಧಗಳ ಮೌಲ್ಯ, ಕೋಪ, ನಿರಾಶೆ, ಒತ್ತಡ ಇತ್ಯಾದಿಗಳನ್ನು ನಿಯಂತ್ರಿಸುವ ಸಾಮರ್ಥ್ಯ, ಕಾನೂನುಪಾಲನೆಯ ಗೌರವವನ್ನು ಕಲಿಸುತ್ತಿದ್ದೇವೆಯೇ?

3-4ನೇ ತರಗತಿಯ ಹುಡುಗಿಯೊಬ್ಬಳು ವಯಸ್ಸಾದ ವ್ಯಕ್ತಿಯೊಬ್ಬರನ್ನು ಏಕವಚನದಲ್ಲಿ ‘ಏಯ್ ಬಾರೋ, ಕುತ್ಕೊಳೋ’ ಎಂದು ಮಾತನಾಡಿಸುತ್ತಿದ್ದಳು. ಮುಜುಗರಕ್ಕೊಳಗಾದ ಅವರು ಮೆಲ್ಲನೆ ಬಂದು, ‘ನಿಮ್ಮ ಹೆತ್ತವರು ಯಾರಮ್ಮಾ..’ ಎಂದು ಕೇಳಿದರು. ಆಕೆ ಕೈ ತೋರಿಸಿದೆಡೆಗೆ ನಡೆದು, ಹುಡುಗಿಯ ಹೆತ್ತವರ ಬಳಿ, ‘ನೋಡಿ, ನಿಮ್ಮ ಮಗುವಿಗೆ ಸಂಸ್ಕಾರ ತಿಳಿಸಿಕೊಡಿ, ಹಿರಿಯರು- ಕಿರಿಯರು ಎನ್ನದೆ ವರ್ತಿಸುವುದು ಸರಿಯಲ್ಲ’ ಎಂದಾಗ, ಆ ದಂಪತಿ ಆ ಹಿರಿಯ ವ್ಯಕ್ತಿಯ ಮೇಲೆ ಕೋಪಗೊಂಡು ‘ನಮ್ಮ ಮಗಳು, ಹೇಗೆ ಬೇಕಾದರೂ ಬೆಳೆಸುತ್ತೇವೆ, ನಿಮಗೇನು?’ ಎಂಬಿತ್ಯಾದಿ ಮರುಪ್ರಶ್ನಿಸಿ ಬೈದು ಕಳಿಸುತ್ತಾರೆ. ವೃದ್ಧರು ಬೇಸರದಿಂದ ಹೋಗುತ್ತಾರೆ. ಮುಂದೊಂದು ದಿನ ಅದೇ ಹುಡುಗಿ ಖ್ಯಾತ ಕಂಪನಿಯ ಉನ್ನತ ಹುದ್ದೆಗಾಗಿ ಸಂದರ್ಶನದಲ್ಲಿ ಭಾಗವಹಿಸುತ್ತಾಳೆ. ಸಂದರ್ಶನವಾದ ಮೇಲೆ ಕಂಪನಿಯ ಅಧಿಕಾರಿಗಳು ಆಕೆಯನ್ನುದ್ದೇಶಿಸಿ, ‘ನೀವು ಎಲ್ಲ ವಿಧದಲ್ಲೂ ಹುದ್ದೆಗೆ ಅರ್ಹರಿದ್ದೀರಿ, ಆದರೆ ಸಂದರ್ಶನ ಮಾಡುತ್ತಿದ್ದ ಹಿರಿಯರೆದುರು ಕಾಲ ಮೇಲೆ ಕಾಲು ಹಾಕಿ ಕೂತು, ಶಿಷ್ಟಾಚಾರ ಉಲ್ಲಂಘಿಸಿದ್ದೀರಿ. ಅದಕ್ಕಾಗಿ ನಿಮ್ಮನ್ನು ಕೈಬಿಡಲಾಗಿದೆ’ ಎನ್ನುತ್ತಾರೆ. ಬಹುಶಃ ಬಾಲ್ಯದಲ್ಲೇ ಹೆತ್ತವರು ಸಭ್ಯತೆಯನ್ನು ಕಲಿಸಿದ್ದರೆ, ಅಥವಾ ಮಕ್ಕಳ ತಪ್ಪನ್ನು ನೋಡಿಯೂ ಕುರುಡರಂತೆ ವರ್ತಿಸದಿದ್ದಿದ್ದರೆ ಉನ್ನತ ಅವಕಾಶ ಕೈ ತಪ್ಪುತ್ತಿರಲಿಲ್ಲ ಅಲ್ಲವೇ?

ಮೊನ್ನೆಯಷ್ಟೇ ಹುಡುಗಿಯೊಬ್ಬಳು ತನ್ನೊಂದಿಗೆ ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಿ, ಬಳಿಕ ಆಯತಪ್ಪಿ ಬಿದ್ದನೆಂದು ಸುಳ್ಳು ಕತೆ ಕಟ್ಟಿ ಕೊನೆಗೂ ಪೊಲೀಸರ ತನಿಖೆಯಲ್ಲಿ ಕೊಲೆ ಎಂದು ಬಯಲಾದ ಸುದ್ದಿ ದೇಶದಾದ್ಯಂತ ಸಂಚಲನ ಉಂಟು ಮಾಡಿತ್ತು. ಹಾಗೆಯೇ ಕಳ್ಳತನ, ಧೂಮಪಾನ, ಮದ್ಯಪಾನ, ದುಶ್ಚಟಗಳಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಿರುವುದು ವಿಪರ್ಯಾಸ. ಗೊತ್ತಿದ್ದೂ ಯಾಕೆ ಹೀಗೆ ತಪ್ಪು ಮಾಡುತ್ತಾರೆ ಎಂದು ಆಲೋಚಿಸಿ, ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಮಕ್ಕಳಿಗೆ ಶಿಕ್ಷಣ ಒದಗಿಸಿ, ಕೆಲಸಕ್ಕೆ ಹಚ್ಚಿದರೆ ಸಾಲದು, ಸಮಾಜದಲ್ಲಿ ಗೌರವಯುತವಾಗಿ, ಕರುಣೆ, ಸಹಾನುಭೂತಿ, ಆತ್ಮಸಂಯಮ, ಜವಾಬ್ದಾರಿ, ಸಾಮಾಜಿಕ ಬದ್ಧತೆ, ಮಾನವೀಯ ಗುಣಗಳೊಂದಿಗೆ ಬದುಕುವುದನ್ನೂ ಬಾಲ್ಯದಿಂದಲೇ ಕಲಿಸಿಕೊಡಬೇಕು. ಈ ಜವಾಬ್ದಾರಿ ಕೇವಲ ಶಾಲೆ, ಕಾಲೇಜುಗಳದ್ದಲ್ಲ. ಮನೆಯೇ ಮಗುವಿನ ಮೊದಲ ಪಾಠಶಾಲೆ. ಪಾಲಕರ ನಡವಳಿಕೆ, ಶಿಕ್ಷಕರ ಮಾರ್ಗದರ್ಶನ, ಸಮಾಜದ ವಾತಾವರಣ ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳೊಂದಿಗೆ ಮಾತನಾಡುವುದು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು, ಸೋಲು-ನಿರಾಶೆಗಳನ್ನು ಧೈರ್ಯದಿಂದ ಎದುರಿಸುವ ಮನೋಬಲ ಬೆಳೆಸುವುದು, ಸಮಸ್ಯೆಗಳಿಗೆ ಕಾನೂನುಬದ್ಧ-ನೈತಿಕ ಪರಿಹಾರ ಕಂಡುಕೊಳ್ಳುವ ದೃಷ್ಟಿಕೋನ ವನ್ನು ಬೆಳೆಸುವುದು ಅತ್ಯಗತ್ಯ.

ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಡಿಜಿಟಲ್ ಬಳಕೆಯ ಜವಾಬ್ದಾರಿ ಮತ್ತು ಕಾನೂನಿನ ಅರಿವನ್ನೂ ನೀಡಬೇಕು. ಪಠ್ಯ ಆಧಾರಿತ ಶಿಕ್ಷಣವು ಬುದ್ಧಿವಂತಿಕೆಯನ್ನು ಬೆಳೆಸಿದರೆ, ಮೌಲ್ಯ ಶಿಕ್ಷಣವು ಮಾನವೀಯತೆಯನ್ನು ಬೆಳೆಸುತ್ತದೆ. ಈ ಎರಡೂ ಸಮತೋಲನವಾಗಿ ಬೆಳೆದಾಗ ಮಾತ್ರ ಉತ್ತಮ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಉತ್ತಮ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಷ್ಟೇ ಅಲ್ಲ, ಉತ್ತಮ ಗುಣಗಳನ್ನು ಹೊಂದಿರುವ ನಾಗರಿಕರನ್ನು ರೂಪಿಸುವುದು ಶಿಕ್ಷಣ ವ್ಯವಸ್ಥೆಯ ಗುರಿಯಾಗಬೇಕು.

ವಿದ್ಯಾಭ್ಯಾಸ ಮಾಡಿದವರ ಸಂಖ್ಯೆ ಹೆಚ್ಚಾದಂತೆ ಅಪರಾಧಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಬದಲಾಗಿ ಅದು ಹೆಚ್ಚುತ್ತಿರುವುದು ಅತಂಕದ ವಿಷಯ. ಹಾಗಾಗಿ, ವ್ಯಕ್ತಿತ್ವ ನಿರ್ವಣಕ್ಕೆ ಕೇವಲ ಶಿಕ್ಷಣ ಸಾಕಾಗುವುದಿಲ್ಲ; ಅದರ ಜತೆಗೆ ಸಂಸ್ಕಾರ, ಮೌಲ್ಯಗಳು ಮತ್ತು ಉತ್ತಮ ನಡತೆಯೂ ಅಗತ್ಯ.

ಮಕ್ಕಳು ತಪ್ಪು ಮಾಡಿದಾಗ ಅವರನ್ನು ಪ್ರೀತಿಯಿಂದ ತಿದ್ದಿ, ಸರಿಯಾದ ದಾರಿಯಲ್ಲಿ ನಡೆಸುವುದು ಹೆತ್ತವರ ಪ್ರಮುಖ ಜವಾಬ್ದಾರಿ. ತಪ್ಪನ್ನು ಸಮರ್ಥಿಸುವುದು, ಬೆಂಬಲಿಸುವುದು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಹಾನಿಕಾರಕ. ಅಂತಹ ಪೋ›ತ್ಸಾಹವೇ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ತಪ್ಪುಗಳನ್ನು ಮಾಡಲು ಕಾರಣವಾಗಬಹುದು. ಮಕ್ಕಳಿಗೆ ಬೇರೆ ಯಾರೇ ಎಷ್ಟೇ ಬುದ್ಧಿ ಹೇಳಿದರೂ ಅದು ಅವರ ಮನಸ್ಸಿಗೆ ತಲುಪದೇ ಇರಬಹುದು. ಆದರೆ ಅದೇ ಮಾತನ್ನು ಹೆತ್ತವರು ಪ್ರೀತಿಯಿಂದ, ಕಾಳಜಿಯಿಂದ ಮತ್ತು ದೃಢವಾಗಿ ಹೇಳಿದಾಗ ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೆತ್ತವರ ಮಾತಿಗೆ ಮಕ್ಕಳು ವಿಶೇಷ ಮೌಲ್ಯ ನೀಡುವುದರಿಂದ, ತಮ್ಮ ತಪ್ಪನ್ನು ಬೇಗನೆ ಅರಿತು ತಿದ್ದಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಶಿಸ್ತು ಮತ್ತು ಜವಾಬ್ದಾರಿಯುತ ನಡತೆಯನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ‘ಮಕ್ಕಳಿಗಾಗಿ ಆಸ್ತಿ, ಹಣ, ಸಂಪತ್ತನ್ನು ಕೂಡಿಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂದು ಹಿರಿಯರು ಹೇಳಿದ್ದು ಅದಕ್ಕೇ. ಹಣ, ಆಸ್ತಿ ಕರಗಿ ಹೋಗಬಹುದು. ಆದರೆ ಮೌಲ್ಯ, ಸಂಸ್ಕಾರ ಮತ್ತು ಶಿಕ್ಷಣಗಳೆಲ್ಲ ನಾಶವಾಗದ ಸಂಪತ್ತು.

ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈ ವೇಳೆ ರಾಜ್ಯದ 1,281 ಶಾಲಾ-ಕಾಲೇಜುಗಳ 1,31,039 ವಿದ್ಯಾರ್ಥಿಗಳು ಏಕಕಾಲದಲ್ಲಿ ಆನ್​ಲೈನ್ ಮೂಲಕ ಮಾಹಿತಿ ಪಡೆದದ್ದು ನಮಗೆ ಅತೀವ ಸಂತಸ ಉಂಟು ಮಾಡಿದೆ. ಮಕ್ಕಳು ಈಗಲೇ ಜಾಗೃತರಾಗಿ, ದುಶ್ಚಟಗಳಿಂದ ದೂರ ಉಳಿದರೆ ಅವರ ಬದುಕು ಹಸನಾಗುತ್ತದೆ. ಕೆಟ್ಟದ್ದನ್ನು ತಿರಸ್ಕರಿಸುವ ಮನೋಭಾವ ಮೂಡಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಪೂರ್ವಕವಾಗಿ ಕೆಲಸ ಮಾಡಬೇಕು. ಪ್ರಯತ್ನದ ಜತೆ ಭಗವಂತನ ಕೃಪೆ ಇದ್ದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯ. ದುಶ್ಚಟಗಳಿಗೆ ಒಳಗಾದವರ ಮನಃಪರಿವರ್ತನೆ ಮಾಡುವ ಜತೆಗೆ, ಇನ್ನು ಮುಂದೆ ಯಾರೂ ದುಶ್ಚಟಕ್ಕೆ ಒಳಗಾಗದಂತೆ ಮನಸ್ಸು ಕೊಡು ಎಂದು ಶ್ರೀ ಸ್ವಾಮಿಯಲ್ಲಿ ಪ್ರಾರ್ಥಿಸೋಣ.

-(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)