ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಧರ್ಮಸಭೆಯಲ್ಲಿ ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಡಾ.ಚನ್ನಸಿದ್ಧರಾಮ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಾಸಕ ರಾಜಾ ವೇಣುಗೋಪಾಲ ನಾಯಕ, ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ವೃಷಭೇಂದ್ರ ಅಪ್ಪ ಇತರರಿದ್ದರು.
- ಶ್ರೀಶೈಲ ಜಗದ್ಗರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರು ಅಭಿಮತ
- ರುಕ್ಮಾಪುರದಲ್ಲಿ ಧರ್ಮಸಭೆ
- ಎಲ್ಲರಿಗೂ ಆದರ್ಶವಾಗಲಿ ದೈವಭಕ್ತಿ-ದೇಶಭಕ್ತಿ
ಸುರಪುರ: ದೇಹಾಭಿಮಾನಕ್ಕಿಂತ ದೇಶಾಭಿಮಾನ ರೂಢಿಸಿಕೊಳ್ಳಬೇಕು. ಧನಾಭಿಮಾನಕ್ಕಿಂತ ಧರ್ಮಾಭಿಮಾನ ಬೆಳೆಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ಹೀಗಾಗಿ ದೈವಭಕ್ತಿ ಮತ್ತು ದೇಶಭಕ್ತಿ ಎರಡು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ಶ್ರೀಶೈಲ ಜಗದ್ಗುರು ಪಂಡಿತರಾಧ್ಯ ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಹೇಳಿದರು.
ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ಗಣೇಶ ಹಾಗೂ ಆಂಜನೇಯ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಾರತ ದೇಶದ ಸಾಂಸತಿಕ ಪರಂಪರೆಯನ್ನು ಪ್ರಾಚಿನ ಕಾಲದಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿರುವ ಕೀರ್ತಿ ದೇವಸ್ಥಾನಗಳಿಗೆ ಸಲ್ಲುತ್ತದೆ. ದೇವರು, ಧರ್ಮ ಎಂದರೆ ಈ ದೇಶದ ಜನರಿಗೆ ಭಕ್ತಿ, ಪ್ರೀತಿ, ಅಪಾರ ಗೌರವ ಇದೆ. ಈ ದೇಶ ಧರ್ಮ ಪ್ರಧಾನವಾದ ರಾಷ್ಟ್ರ. ದೇವಸ್ಥಾನಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಗುಡಿ ಸಂಸತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ದೇಶವಾಗಿದೆ ಎಂದರು.
ಭಗವಂತ ಎಲ್ಲ ಕಡೆಗಳಲ್ಲಿಯೂ ಇದ್ದಾನೆ. ದೇವಸ್ಥಾನದಲ್ಲಿರುವ ಮೂರ್ತಿಗಳ ಮೂಲಕ ಪ್ರಕಟವಾಗುತ್ತಾನೆ. ಮೂರ್ತಿಗಳಲ್ಲಿ ಅಪಾರವಾದ ಶಕ್ತಿ ಇರುತ್ತದೆ. ನಮ್ಮಲ್ಲಿ ಭಕ್ತಿ ಬೇಕು. ದೇವರಲ್ಲಿ ಒಳ್ಳೆಯ ಭಾವನೆಯಿಂದ ಬೇಡಿಕೊಂಡಾಗ ಉತ್ತಮವಾದ ಫಲ ಖಂಡಿತವಾಗಿ ನೀಡುತ್ತಾನೆ. ಗುಡಿ ಸಂಸತಿಯನ್ನು ರೂಢಿಸಿಕೊಂಡು ಅವುಗಳಲ್ಲಿ ಶ್ರದ್ಧೆ ಇಟ್ಟುಕೊಂಡು ನಿಮ್ಮ ನಿಮ್ಮ ಇಷ್ಟಾರ್ಥ ಪಡೆದುಕೊಳ್ಳಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಸಂಸ್ಥಾನದ ಅರಸರ ಕೊಡುಗೆ ಅಪಾರವಾಗಿದೆ. ದೇಶಾಭಿಮಾನ ಮೆರೆದ ಸುರಪುರ ಅರಸು ಮನೆತನವನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ರುಕ್ಮಾಪುರ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನೆಯಾಗಿರುವುದು ಮತ್ತು ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಜಗದ್ಗುರುಗಳ ಭವ್ಯ ಸಂದೇಶ ನಮ್ಮ ರುಕ್ಮಾಪುರ ಗ್ರಾಮದಲ್ಲಿ ನಮಗೆ ಸಿಕ್ಕಿರುವುದು ಸಹ ಸಂತೋಷವಾಗಿದೆ. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ದೇವರಭೂಪುರದ ಗಜದಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಉತ್ತರ ಪ್ರದೇಶದ ಮಥುರಾ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಮಹಾದೇವಪ್ಪ ಚೆಟ್ಟಿ ಮತ್ತು ಉದ್ಯಮಿ ಕಿಶೋರಚಂದ ಜೈನ ಮಾತನಾಡಿದರು.
ವಿಶ್ವನಾಥ ಚಟ್ಟಿ, ಬಸವರಾಜ ಬಡಗಾ ಸಂಗನಗೌಡ ಪಾಟೀಲ್, ಸಂಗಪ್ಪ ಮಂಟೆ ದಂಪತಿಗಳಿಗೆ, ಕಿಶೋರಚಂದ ಜೈನ ಅವರಿಗೆ ಬನಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ, ಲ್ಮಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ನಿಷ್ಠಿ ಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾ ಸ್ವಾಮೀಜಿ, ಕೊಡೇಕಲ್ ಮಹಲಿನಮಠದ ವೃಷಭೇಂದ್ರ ಅಪ್ಪ, ಆಳಂದ ಶರಣ ಮಂಟಪದ ಚನ್ನಬಸವ ಪಟ್ಟದ್ದೇವರು, ಚಟ್ನಳ್ಳಿಯ ವಿಶ್ವರಾಧ್ಯ ದೇವರು, ಲೋಕಾಪುರದ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ಕೆವೈಡಿಸಿಸಿ ಬ್ಯಾಂಕ್ ನಿದೇರ್ಶಕ ಸುರೇಶ ಸಜ್ಜನ್, ಉದ್ಯಮಿ ಗ್ಯಾನಚಂದ ಜೈನ, ರಾಯಚಂದ ಜೈನ, ರಾಜಾ ಸುಶಾಂತ ನಾಯಕ, ಮಲ್ಲಣ್ಣ ಸಾಹುಕಾರ ಮುಧೋಳ, ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಮಹಾಂತೇಶ ಕಲ್ಲೂರ, ಉಪಾಧ್ಯಕ್ಷ ಹಣಮೇಶಗೌಡ ಪೊಲೀಸ್ ಪಾಟೀಲ್, ಕಾರ್ಯಧ್ಯಕ್ಷ ಮಲ್ಲಪ್ಪ ಚೆಟ್ಟಿ ಇತರರಿದ್ದರು. ಎಸ್.ಎಂ.ಭಕ್ತ ಕುಮಾರ ನಿರೂಪಿಸಿ ವಂದಿಸಿದರು.