ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷಗಳ ತೀವ್ರ ಗದ್ದಲ ಹಾಗೂ ಕೋಲಾಹಲದ ನಡುವೆಯೇ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ-2025’ಕ್ಕೆ ಸರ್ಕಾರವು ಅಂಗೀಕಾರ ಪಡೆದುಕೊಂಡಿತು. ಪ್ರತಿಪಕ್ಷಗಳ ಸದಸ್ಯರು ಮಸೂದೆ ಪ್ರತಿಯನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಗಳ ಈಗಿನ ಸಂಖ್ಯಾಬಲ ನೋಡಿದರೆ, ವಿಧಾನಪರಿಷತ್ನಲ್ಲಿಯೂ ಇದು ಅಂಗೀಕಾರವಾಗುವುದು ಕಷ್ಟವಲ್ಲ. ಆದರೆ ಈ ಮಸೂದೆಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪ್ರಬಲ ವಿರೋಧ ಒಡ್ಡಿವೆ.
ಆ ಪಕ್ಷಗಳ ಅಭಿಪ್ರಾಯಗಳಿಗೂ ಸರ್ಕಾರ ಮನ್ನಣೆ ನೀಡಬೇಕು. ದ್ವೇಷ ಭಾಷಣ ಕಾಯ್ದೆಯು ಅಭಿವ್ಯಕ್ತಿ ಸ್ವಾತಂತ್ರೃನ್ನು ಕಸಿಯದಂತೆ, ಯಾವುದೇ ಸಂದರ್ಭದಲ್ಲಿಯೂ ಸೇಡು ತೀರಿಸಿಕೊಳ್ಳುವುದಕ್ಕೆ ಅಸ್ತ್ರವಾಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಕರ್ನಾಟಕವು ಸೌಹಾರ್ದ, ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಹೆಸರಾದ ನಾಡು. ಇಲ್ಲಿ ಯಾವುದೇ ಕಾಲಘಟ್ಟದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಹಿಂಸೆ, ದಳ್ಳುರಿ, ಗಲಭೆಯಂಥ ಕೃತ್ಯಗಳಿಗೆ ಅವಕಾಶವಿಲ್ಲ. ಕೆಲವೊಮ್ಮೆ ಅಹಿತಕರ ಘಟನೆಗಳು ನಡೆದಿದ್ದರೂ, ಕೂಡಲೇ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಚೋದನಕಾರಿ ಭಾಷಣಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಿದೆ ಎಂದು ಸರ್ಕಾರ ಈ ಮಸೂದೆ ತರಲು ನೀಡಿರುವ ಸಮಜಾಯಿಷಿ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ನಿಷೇಧ ಮಸೂದೆ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ವಿರೋಧ ಪಕ್ಷಗಳು ಹೆದರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಏನೇನು ಮಾತನಾಡಿದ್ದಾರೆ, ಅವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ನೋಡೋಣ’ ಎಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವ ಅಥವಾ ಜನರನ್ನು ತಪ್ಪುದಾರಿಗೆ ಎಳೆಯುವವರು ಯಾರೇ ಆಗಿರಲಿ ಅಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ. ಆದರೆ, ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ’ಯು ಕಾನೂನಾಗಿ ಜಾರಿಯಾದ ಮೇಲೆ ರಾಜಕೀಯ ಅಸ್ತ್ರವಾಗಿ ದುರುಪಯೋಗವಾಗುವ ಆತಂಕವನ್ನು ತಳ್ಳಿ ಹಾಕುವಂತಿಲ್ಲ.
ಪ್ರತಿಪಕ್ಷ ನಾಯಕರ ಮತ್ತು ಜನಪರ ಸಂಘಟನೆಗಳ ಮುಖಂಡರ ಟೀಕೆ ಅಥವಾ ಅಸಮಾಧಾನಕ್ಕೇ ‘ದ್ವೇಷ ಭಾಷಣ’ದ ವ್ಯಾಖ್ಯೆ ನೀಡಿ, ಪ್ರಕರಣ ದಾಖಲಿಸುತ್ತ ಹೋದರೆ, ಅದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಂತಾಗುತ್ತದೆ. ಜನರ ದನಿಯನ್ನು ಹತ್ತಿಕ್ಕುವುದು ಅಥವಾ ಯಾರೂ ಮಾತಾಡದಂತೆ ಭಯದ ವಾತಾವರಣ ಸೃಷ್ಟಿಸುವುದು ಪ್ರಜಾತಂತ್ರದ ಆರೋಗ್ಯಕ್ಕೆ ಮಾರಕ. ಟೀಕೆ, ವಿರೋಧವನ್ನು ರಚನಾತ್ಮಕವಾಗಿ ಸ್ವೀಕರಿಸುವ ಮನೋಭಾವ ಆಡಳಿತ ಪಕ್ಷಕ್ಕೂ ಬೇಕು, ಪ್ರತಿಪಕ್ಷಕ್ಕೂ ಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕ ಜೀವನದಲ್ಲಿ ಪರಾಮರ್ಶೆ ಮತ್ತು ವಿಶ್ಲೇಷಣೆಯಂಥ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ, ಶೀಘ್ರ ಅಸ್ತಿತ್ವಕ್ಕೆ ಬರಲಿರುವ ಹೊಸ ಕಾನೂನು ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ಎಚ್ಚರ ವಹಿಸುವುದು ಸರ್ಕಾರದ ಕರ್ತವ್ಯ.