ಮಂಡ್ಯದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕುಂದುಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. ಉಪವಿಭಾಗಾಧಿಕಾರಿ ಶಿವಮೂರ್ತಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್ ಇದ್ದರು. 
ರಾಜ್ಯ

ತಾಲೂಕು ಮಟ್ಟದ ಸಭೆಯಲ್ಲೂ ಚರ್ಚೆಯಾಗಲಿ

ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನಗರದಲ್ಲಿ ಕುಂದುಕೊರತೆ ನಿವಾರಣಾ ಸಮಿತಿ ಸಭೆ

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ತಾಲೂಕು ಮಟ್ಟದ ಸಭೆಗಳಲ್ಲೂ ಚರ್ಚೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಪಾಂಡವಪುರ ಮತ್ತು ಮಂಡ್ಯ ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಕುಂದುಕೊರತೆ ಸಭೆಯಲ್ಲಿ ಚರ್ಚಿಸಲಾದ ಶೇ.80 ರಷ್ಟು ವಿಷಯಗಳಲ್ಲಿ ಕಾನೂನಿನ ಪ್ರಕಾರ ಮಾಡಬಹುದಾದ ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಬಿಂಡಿಗನವಿಲೆಯಿಂದ ಹಿರಿಸಾವೆಗೆ ಹೋಗುವ ದಾರಿಯ ಮಧ್ಯದ ಐದು ಹಳ್ಳಿಗಳಿಗೆ ರಸ್ತೆಯಲ್ಲಿ ಬಸ್ ಸಂಪರ್ಕ ಇಲ್ಲದೇ ಸದರಿ ಊರಿನ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸದರಿ ಸ್ಥಳ ಪರಿಶೀಲನೆ ನಡೆಸಿ 5 ಹಳ್ಳಿಗಳಿಗೆ ಬಸ್ ಹೋಗಲು ಸಾಧ್ಯವಾಗುದಿಲ್ಲವೆಂದಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗ ಕಲ್ಪಿಸಿ ಎಂದು ಹೇಳಿದರು.
ಶ್ರೀರಂಗಪಟ್ಟಣ ಟೌನ್‌ನಲ್ಲಿ ಡಾ.ಬಾಬು ಜಗಜೀವನರಾಮ್ ಸಮುದಾಯದ ಭವನ ನಿರ್ಮಾಣ ಮಾಡಲು ಈಗಾಗಲೇ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಮೊದಲ ಹಂತದಲ್ಲಿ ಬಿಡುಗಡೆಗೊಂಡ 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು 2 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಕೆ.ಆರ್.ಐ.ಡಿ.ಎಲ್ಗೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕೆ.ಆರ್.ಪೇಟೆ ಪುರಸಭಾ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕ್ಷೇಮಾಭಿವೃದ್ಧಿ/ದಿನಗೂಲಿ ಪೌರಕಾರ್ಮಿಕರು ಹೊರಗುತ್ತಿಗೆ ವಾಹನ ಚಾಲಕರು ಮತ್ತು ನೀರು ಸರಬರಾಜು ನೌಕರರಿಗೆ ಸದರಿ ವರ್ಷದ ಜುಲೈವರೆಗೂ ವೇತನ ಪಾವತಿಸಲಾಗಿದೆ. ಪುರಸಭೆಯಿಂದ ಬಂದ ತೆರೆಗೆಯಲ್ಲಿ ಸದರಿ ಪೌರಕಾರ್ಮಿಕರಿಗೆ ವೇತನ ನೀಡಲಾಗುವುದು. ಕಳೆದ ಬಾರಿ ನಡೆದ ಸಭೆಯ ವಿಷಯಗಳ ಕುರಿತು 1 ತಿಂಗಳ ಹಿಂದೆಯೇ ಅಧಿಕಾರಿಗಳ ಜತೆ ಸಭೆ ನಡೆಸಿ ಅನುಪಾಲನಾ ವರದಿ ನೀಡಲು ತಿಳಿಸಲಾಗಿತ್ತು. ಅಂತೆಯೇ ಕಾನೂನು ಬದ್ಧವಾಗಿ ಮಾಡಲಾಗುವ ಕೆಲಸಗಳನ್ನು ಮಾಡಿ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರು ಹಾಗೂ ಮೈಸೂರು ವಲಯ ಪೊಲೀಸ್ ಆಯುಕ್ತರ ನಡುವೆ ಕುಂದು ಕೊರತೆ ಸಭೆ ಆಯೋಜಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗುವುದು. ಸರಿಯಾದ ಸಮಯಕ್ಕೆ ಎಲ್ಲ ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕುಂದುಕೊರತೆ ಸಭೆ ನಡೆಸಬೇಕು. ಜಿಲ್ಲೆಯಲ್ಲಿ 2023-2024 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಜನರಿಗೆ ವಿವಿಧ ಯೋಜನೆಗಳ ಮೂಲಕ 18,621 ಜನರಿಗೆ 161.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಾಗೂ 2024-2025 ರಲ್ಲಿ 24,112 ಜನರಿಗೆ 228.71 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಸಾರ್ವಜನಿಕರೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಸಾಲ ಸೌಲಭ್ಯವನ್ನು ಪರಿಶಿಷ್ಟರಿಗೆ ತಲುಪಿಸುವಂತೆ ಜಿಲ್ಲಾ ಮಟ್ಟದ ಸಭೆ ಆಯೋಜಿಸಿ ಎಂದು ಹೇಳಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರಿದ್ದರು. ಸಭೆ ನಂತರ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಲಾಯಿತು.