ಸಂತೇಮರಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮೋಹನ್‌ಕುಮಾರ್ ಉದ್ಘಾಟಿಸಿದರು. ಪುಟ್ಟಗೌರಮ್ಮ, ಪ್ರಿಯಶಂಕರ್, ಉಪನ್ಯಾಸಕರಾದ ಪ್ರಸಾದಸ್ವಾಮಿ, ಚಿದಾನಂದಸ್ವಾಮಿ, ಮಹದೇವಪ್ರಭು, ಪೊಲೀಸ್ ಇಲಾಖೆಯ ರಮೇಶ್, ಚಿಕ್ಕರಾಜು ಇದ್ದರು.
- ಸಂತೇಮರಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಮೋಹನ್‌ಕುಮಾರ್
- ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
ಯಳಂದೂರು: ಮಾದಕ ವಸ್ತುಗಳನ್ನು ಸೇವಿಸುವ ಹವ್ಯಾಸ ಇತ್ತೀಚೆಗೆ ಯುವಕರಲ್ಲಿ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ಅರಿವು ಹೊಂದುವುದರ ಜತೆಗೆ ಇವಗಳಿಂದ ದೂರವಿರಬೇಕು ಎಂದು ಸಂತೇಮರಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಮೋಹನ್‌ಕುಮಾರ್ ಸಲಹೆ ನೀಡಿದರು.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತನ್ನು ಹಲವು ದಶಕಗಳಿಂದಲೂ ಕಾಡುತ್ತಿರುವ ಸಮಸ್ಯೆ ಎಂದರೆ ಮಾದಕ ವಸ್ತುಗಳ ಸೇವನೆ. ಇದು ನಮ್ಮ ದೇಶದಲ್ಲೂ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದರು.
ಗಾಂಜಾ, ಅಫೀಮು, ಚರಸ್ ಸೇರಿದಂತೆ ಇತರ ಮತ್ತು ಬರಿಸುವ ವಸ್ತುಗಳ ಸೇವನೆಯ ಚಟಕ್ಕೆ ಬಿದ್ದವರು ಇದರಿಂದ ಹೊರ ಬರಲು ಕಷ್ಟವಾಗುತ್ತಿದೆ. ಇದರ ದಾಸರಾಗುವರು. ದುಬಾರಿ ಹಣ ತೆತ್ತು ಅದನ್ನು ಕೊಂಡುಕೊಳ್ಳಲು ಎಂತಹದ್ದೇ ಕೃತ್ಯ ಮಾಡಲು ತಯಾರಿರುತ್ತಾರೆ. ಹಾಗಾಗಿ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ವಸ್ತುಗಳನ್ನು ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ದೊಡ್ಡ ಜಾಲ ನಗರ ಪ್ರದೇಶಗಳಲ್ಲಿದೆೆ. ಇದರ ಸೇವನೆ ಮಾಡುವರು ತಮ್ಮ ಆರೋಗ್ಯದ ಜತೆಗೆ ಪಾಲಕರು ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತಾರೆ. ಇದರೊಂದಿಗೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ಜೀವನ ಸಂಪೂರ್ಣ ನಾಶವಾಗುತ್ತದೆ. ಜಿಲ್ಲೆಯಲ್ಲೂ ಗಾಂಜಾ ಮಾರಾಟ ಮಾಡುವ ಅನೇಕರನ್ನು ಇಲಾಖೆ ಹಿಡಿದು ಜೈಲಿಗಟ್ಟಲಾಗಿದೆ. ಇಂತಹವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಪುಟ್ಟಗೌರಮ್ಮ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಪಿಸಿಕೊಳ್ಳಬೇಕು. ಜತೆಗೆ ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು. ಮಾದಕ ವಸ್ತುಗಳ ಸೇವನೆ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಯುವಕರೇ ಇದರ ದಾಸ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇಡೀ ವಿಶ್ವದಲ್ಲಿ ಇದರ ಚಟಕ್ಕೆ ಪ್ರತಿ ವರ್ಷವೂ ಲಕ್ಷಾಂತರ ಮಕ್ಕಳು ಬಲಿಯಾಗುತ್ತಿದ್ದಾರೆ. ಅಲ್ಲದೆ ಇವರು ನಡೆಸುವ ಕೃತ್ಯದಿಂದಲೂ ಅನೇಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದೊಂದು ಚಟವಾಗಿದ್ದು ಇದರಿಂದ ದೂರವಿರಬೇಕು. ಸಮಾಜವನ್ನು ಹಾಳು ಮಾಡುವ ಇಂತಹ ಕೃತ್ಯಗಳಿಗೆ ಆದ್ಯತೆ ನೀಡಬಾರದು ಎಂದು ಕಿವಿ ಮಾತು ಹೇಳಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನವಿತರಣೆ ಮಾಡಲಾಯಿತು. ಕಾಲೇಜು ಪ್ರಾಂಶುಪಾಲ ಪ್ರಿಯಶಂಕರ್, ಉಪನ್ಯಾಸಕರಾದ ಪ್ರಸಾದಸ್ವಾಮಿ, ಚಿದಾನಂದಸ್ವಾಮಿ, ಮಹದೇವಪ್ರಭು, ಪೊಲೀಸ್ ಇಲಾಖೆಯ ರಮೇಶ್, ಚಿಕ್ಕರಾಜು ಸೇರಿದಂತೆ ಇತರರು ಇದ್ದರು.