ಕಲಬುರಗಿ ಶರಣಬಸವ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಡಾ.ಶರಣಪ್ಪ ಎಸ್​.ಡಿ., ಡಾ.ಲಕ್ಷ್ಮೀ ಪಾಟೀಲ್​ ಮಾಕಾ, ಯಲ್ಲಂದೂರು ಶಾಲು, ಡಾ.ಎಸ್​.ಎಚ್​.ಹೊನ್ನಳ್ಳಿ, ಡಾ.ಶಿವಕುಮಾರ ಜವಳಿಗಿ ಇದ್ದರು. 
ರಾಜ್ಯ

ಯುವಕರು ಪೊಲೀಸರ ಶಕ್ತಿವರ್ಧಕರಾಗಲಿ

ಪ್ರಮುಖ ಮುಖ್ಯಾಂಶಗಳು

  • ಡಾ.ಶರಣಪ್ಪ ಎಸ್​.ಡಿ. ಆಶಯ
  • ಶರಣಬಸವ ವಿವಿಯಲ್ಲಿ ಮಾದಕ ವಸ್ತು ದುರ್ಬಳಕೆ ವಿರೋಧಿ ದಿನ
ಕಲಬುರಗಿ: ಮಾದಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಯುವಕರು ತಮ್ಮ ತಮ್ಮ ಪ್ರದೇಶಗಳಲ್ಲಿ ನಿಗಾ ವಹಿಸುವುದರ ಜತೆ ಮಾಹಿತಿ ನೀಡಿ ಪೊಲೀಸರಿಗೆ ಶಕ್ತಿವರ್ಧಕರಾಗಿ ಕಾರ್ಯನಿರ್ವಹಿಸಬೇಕು ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಗರ ಪೊಲೀಸ್​ ಆಯುಕ್ತಾಲಯ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಹಾವಳಿ ತಡೆಗಟ್ಟುವ ಹೋರಾಟ ಪೊಲೀಸ್​ ಇಲಾಖೆ ಅಥವಾ ಭದ್ರತಾ ಸಂಸ್ಥೆಗಳು ಮಾತ್ರ ಯಶಸ್ವಿಯಾಗಿ ನಡೆಸಲು ಸಾಧ್ಯವಿಲ್ಲ. ಸಮಾಜ, ವಿಶೇಷವಾಗಿ ಯುವಜನತೆ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದ ಮೇಲೆ ನಿಗಾ ಇರಿಸಿ ಪರಿಣಾಮಕಾರಿಯಾಗಿ ಮಟ್ಟ ಹಾಕುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾಜದ ಬೇರುಗಳನ್ನೇ ಕಿತ್ತು ಹಾಕುತ್ತಿರುವ ಮಾದಕ ವಸ್ತುಗಳ ಹಾವಳಿ ತಡೆಯುವ ಮಹತ್ತರ ಜವಾಬ್ದಾರಿ ಯುವಜನರ ಮೇಲಿದೆ. ಯುವ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿ ಯುವಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾದಕ ವ್ಯಸನಿಗಳಲ್ಲಿ ಬಹುಪಾಲು ಜನರು 18-35 ವರ್ಷ ವಯೋಮಾನದವರು ಇರುವುದು ಆತಂಕಕಾರಿ ವಿಷಯ. ಇದು ದೇಶದ ಅಭಿವೃದ್ಧಿಗೆ ತಮ್ಮ ಜ್ಞಾನ, ಶಕ್ತಿ ಹಾಗೂ ಪ್ರತಿಭೆ ಸಮರ್ಪಿಸಬೇಕಾದ ಅತ್ಯಂತ ಮಹತ್ವದ ವಯಸ್ಸು. ಆದರೆ ವ್ಯಸನಕ್ಕೆ ಒಳಗಾಗುವ ಮೂಲಕ ಕುಟುಂಬ, ಸಮಾಜ ಮತ್ತು ರಾಷ್ಟ್ರಕ್ಕೂ ಹಾನಿ ಉಂಟು ಮಾಡುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಆರಂಭಿಸುವುದು ಸುಲಭ. ಆದರೆ ಆ ದುಶ್ಚಟದಿಂದ ಹೊರಬರುವುದು ಅತ್ಯಂತ ಕಷ್ಟ್ಟಕರ. ಕಲಬುರಗಿ ನಗರದಲ್ಲೇ ಎರಡು ವರ್ಷದ ಹಿಂದೆ ಇದ್ದ 50-60 ಮಾದಕ ವ್ಯಸನಿಗಳ ಸಂಖ್ಯೆ 2025ರಲ್ಲಿ 500ಕ್ಕೂ ಹೆಚ್ಚಾಗಿದೆ. ಪ್ರಸಕ್ತ ವರ್ಷ 100ಕ್ಕೂ ಹೆಚ್ಚು ವ್ಯಸನಿಗಳು ಸೇರ್ಪಡೆಯಾಗಿದ್ದಾರೆ. ಇಂಥ ಆತಂಕಕಾರಿ ಬೆಳವಣಿಗೆಯನ್ನು ತಕ್ಷಣವೇ ನಿಯಂತ್ರಿಸುವ ತುರ್ತು ಅಗತ್ಯವಿದೆ ಎಂದರು.
ಉಪ ಪೊಲೀಸ್​ ಆಯುಕ್ತೆ ಯಲ್ಲಂದೂರು ಶಾಲು ಮಾತನಾಡಿದರು. ವಿವಿ ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್​ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್​.ಎಚ್​. ಹೊನ್ನಳ್ಳಿ, ಡೀನ್​ ಡಾ.ಶಿವಕುಮಾರ ಜವಳಿಗಿ ಇತರರಿದ್ದರು. ಬಳಿಕ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹಾಗೂ ಗೃಹ ಸಚಿವ ಪ್ರಿಯಾಂಕ್​ ಖರ್ಗೆ‘ ಉದ್ಘಾಟಿಸಿದ ರಾಜ್ಯಮಟ್ಟದ ಅಂತಾರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮವನ್ನು ವಿಡಿಯೋ ಮೂಲಕ ಸಭಿಕರೆಲ್ಲರೂ ವೀಸಿದರು.
"

ಸಾರ್ವಜನಿಕರು, ಯುವಕರು ತಮ್ಮ ಸುತ್ತಮುತ್ತ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಮಾಹಿತಿ ನೀಡುವವರ ಗುರುತು ಗೌಪ್ಯವಾಗಿಡಲಾಗುತ್ತದೆ.

— > ಡಾ.ಶರಣಪ್ಪ ಎಸ್​.ಡಿ. ನಗರ ಪೊಲೀಸ್​ ಆಯುಕ್ತ