ಅರ್ಧಕ್ಕೆ ನಿಂತ ಕಾಮಗಾರಿ ಚಾಲನೆಯಾಗಲಿ 
ರಾಜ್ಯ

ಅರ್ಧಕ್ಕೆ ನಿಂತ ಕಾಮಗಾರಿ ಚಾಲನೆಯಾಗಲಿ

ಕೋಲಾರ ಡೆಸ್ಕ್
ಮುಳಬಾಗಿಲು : ನಗರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಒಳಸೇತುವೆ ಮತ್ತು ಮೇಲ್​ ಸೇತುವೆ ನಿಮಾರ್ಣ ಕಾಮಗಾರಿ ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕೂಡಲೇ ಕಾಮಗಾರಿಗೆ ವೇಗ ನೀಡಿ ಜನಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಗರದ ಹೊರವಲಯದ ತಾಯಲೂರು ರಸ್ತೆಯ ಬೈಪಾಸ್​ನಲ್ಲಿ ಬುಧವಾರ ರೈತ ಸಂಘದ ಪದಾಧಿಕಾರಿಗಳು ಹೆದ್ದಾರಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. started
ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಜಿಲ್ಲಾಧ್ಯಕ್ಷ ಕೊತ್ಮಿರಿ ಮಂಜುನಾಥ್​ ಮಾತನಾಡಿ, ಈಗ ಕಾಮಗಾರಿ ಕುಂಠಿತಗೊಂಡಿರುವುದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಅಪಘಾತಗಳು ನಡೆಯುತ್ತಿದ್ದರೂ ಈ ಬಗ್ಗೆ ಗಮನಹರಿಸುವವರಿಲ್ಲವಾಗಿದೆ. ಇದೇ ರೀತಿ ಮುಂದುವರಿದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹೆದ್ದಾರಿಯ ಕಾಮಗಾರಿಅವೈಜ್ಞಾನಿಕವಾಗಿದ್ದು, ಸರ್ವೀಸ್​ ರಸ್ತೆಗಳನ್ನು ಅರ್ಧಂಬದ್ದ ಮಾಡಿ ಅವುಗಳಿಂದ ಹಳ್ಳಗಳಿಂದ ಕೂಡಿವೆ. ಮುಂದುಗಡೆ ಇರುವ ವಾಹನ ಬ್ರೇಕ್​ ಹಾಕಿದಾಗ ಹಿಂದೆಗಡೆಯಿಂದ ಬರುತ್ತಿರುವ ವಾಹನ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿವೆ. ಹಲವಾರು ದ್ವಿ&ಚಕ್ರವಾಹನ ಸವಾರರು ಈ ರಸ್ತೆಯಲ್ಲಿ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕರು ಅಂಗವಿಕಲರಾಗಿದ್ದಾರೆ. ಆದ್ದರಿಂದ ತಕ್ಷಣ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಅರ್ಧದಲ್ಲೇ ನಿಂತಿರುವ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕೂ ಮೊದಲು ಸರ್ವೀಸ್​ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿರು.
ರೈತ ಸಂಘದ ಯುವ ಘಟಕದ ಅಧ್ಯಕ್ಷ ಕಲ್ವಂಜಲಿ ರಾಮ ಶಿವಣ್ಣ ಮಾತನಾಡಿ, ಈಗಾಗಲೇ ರಸ್ತೆ ಅಪಘಾತದಲ್ಲಿ ತೊಂದರೆಗೆ ಒಳಗಾಗಿರುವರಿಗೆ ಹೆದ್ದಾರಿ ಗುತ್ತಿಗೆದಾರರಿಂದ ಮತ್ತು ಅಧಿಕಾರಿಗಳಿಂದ ಪರಿಹಾರ ಕೊಡಿಸಬೇಕು. ಸರ್ಕಾರವು ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.