ತಗಡೂರು ಗ್ರಾಮದ ಗಾಂಧಿ ಆಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನೂಕ್ ಮಾತನಾಡಿದರು. ಪ್ರಸನ್ನ, ಮೋಹನ್, ಸಂತೋಷ್ ಕೌಲಗಿ ಇದ್ದರು. 
ರಾಜ್ಯ

ಗಾಂಧಿ ತತ್ವದಡಿ ಗ್ರಾಮ ಕಟ್ಟುವ ಕೆಲಸವಾಗಲಿ

ನಂಜನಗೂಡು: ಗಾಂಧೀಜಿ ಅವರ ತತ್ವಗಳ ಮೂಲಕ ಗ್ರಾಮಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದು ದೀನಬಂಧು ಸಂಸ್ಥಾಪಕ ಪ್ರೊ.ಜಯದೇವ್ ಹೇಳಿದರು.
ತಾಲೂಕಿನ ತಗಡೂರು ಗ್ರಾಮದ ಗಾಂಧಿ ಆಶ್ರಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವೋದಯ ದಿನಾಚರಣೆಯಲ್ಲಿ ಮಾತನಾಡಿ, ಗಾಂಧಿ ತತ್ವಗಳು ಸ್ವಾವಲಂಬನೆ ಸಂಕೇತವಾಗಿದೆ. ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸಬಾರದು. ಮಹಿಳೆಯರು ತರಕಾರಿ ಬೆಳೆಯುವುದರಿಂದ ಹಿಡಿದು ಕನಿಷ್ಠ ಬುಟ್ಟಿ ತಯಾರಿಸುವ ಸ್ವಂತ ಉದ್ದಿಮೆಯನ್ನಾದರೂ ಸ್ಥಾಪಿಸಬೇಕು ಎಂದರು.
ಎಲ್ಲದಕ್ಕೂ ಸರ್ಕಾರದ ಅನುದಾನ ಮುಖ್ಯವಲ್ಲ. ಸಂಪನ್ಮೂಲ ಹಾಗೂ ಜನರ ಹಣವನ್ನು ಜವಾಬ್ದಾರಿತವಾಗಿ ಬಳಕೆ ಮಾಡಿ, ಗಾಂಧಿ ತತ್ವದಡಿಯಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡಬೇಕಾಗಿದೆ ಎಂದರು.
ನೆದರ್‌ಲೆಂಡ್ ನಿವಾಸಿ ಅನೂಕ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರ ಚರಕ ಪರಿಚಯವಾಯಿತು. ಇಲ್ಲಿನ ಕೇಂದ್ರದಲ್ಲಿ ಮಕ್ಕಳು ಚರಕ ಹಿಡಿದು ನೂಲು ನೇಯುತ್ತಿರುವುದು ನೋಡಿದರೆ ಖುಷಿಯಾಗುತ್ತದೆ. ಇಂತಹ ಕೆಲಸಗಳನ್ನು ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಹಿರಿಯ ಗಾಂಧಿವಾದಿ ಮೋಹನ್ ಮಾತನಾಡಿ,1921 ರಲ್ಲಿ ತಗಡೂರು ರಾಮಚಂದ್ರರಾವ್ ನೇತೃತ್ವದಲ್ಲಿ ಖಾದಿ ಕೇಂದ್ರ ಚೆನ್ನಾಗಿ ನಡೆಯುತ್ತಿತ್ತು. ಕ್ರಮೇಣ ಖಾದಿ ಕೇಂದ್ರ ನಿಧಾನವಾಗಿ ಪಾಳು ಬೀಳುವಂತಾಯಿತು. ಇಲ್ಲಿ ಕೆಲಸ ಮಾಡುವ ನೇಕಾರರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಇಲ್ಲಿನ ಕೂಗು ಸರ್ಕಾರಕ್ಕೆ ತಲುಪಬೇಕಾಗಿದೆ ಎಂದರು.
ಮೇಲುಕೋಟೆಯ ಸಂತೋಷ್ ಕೌಲಗಿ ಮಾತನಾಡಿ, ಖಾದಿ ಕೇಂದ್ರಗಳು ಸರ್ಕಾರಕ್ಕೆ ಸೇರಿದ ನಂತರ ಜನರಿಂದ ದೂರವಾಗಿದೆ. ಸರ್ಕಾರವನ್ನು ಅವಲಂಬಿಸದೆ ಸ್ಥಳೀಯ ಆಡಳಿತ ಹಾಗೂ ಜನರು ಕೈ ಜೋಡಿಸಿದರೆ ಮಾತ್ರ ಖಾದಿ ಕೇಂದ್ರಗಳು ಉಳಿಯುತ್ತವೆ ಎಂದರು.
ರಂಗಕರ್ಮಿ ಪ್ರಸನ್ನ, ಅಮೃತಾ, ರಶ್ಮಿ ಕೋಟೆ, ರೈತ ಶ್ರೀಕುಮಾರ್, ಹುಣಸವಾಡಿ ರಾಜಣ್ಣ, ಬದನವಾಳು ಮಹದೇವಪ್ಪ, ಡಾ. ಸೋಮಶೇಖರ್, ತಗಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು, ಸದಸ್ಯ ಮುದ್ದು ಮಾದಶೆಟ್ಟಿ, ಮಸಣಯ್ಯ, ಬಾಲು, ಬಸವರಾಜು, ಅಭಿಲಾಷ್ ಇತರರಿದ್ದರು.