ರಾಯಚೂರು ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ರೈತರಿಂದ ರೈತರಿಗೆ ಕಾರ್ಯಕ್ರಮವನ್ನು ಸಿದ್ಧಬಸವೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ಎಸ್.ಡಿ.ಗೌಡಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಕೃಷಿ ವಿಸ್ತರಣಾ ನಿರ್ದೇಶಕ ಎ.ಆರ್.ಕುರುಬರ್, ಸಂಶೋಧನಾ ನಿರ್ದೇಶಕ ಅಮರೇಗೌಡ, ಬಿ.ಮಲ್ಲಿಕಾರ್ಜುನ, ಮಲ್ಲೇಶ ಕುಲುಮಿ ಇದ್ದರು.
- ಬಳಗಾನೂರಿನ ಸಿದ್ಧಬಸವ ಸ್ವಾಮೀಜಿ ಅಭಿಮತ
- ರೈತರಿಂದ ರೈತರಿಗೆ ಕಾರ್ಯಕ್ರಮ
ರಾಯಚೂರು: ಒಕ್ಕಲುತನ ವ್ಯಾಪಾರವಲ್ಲ, ಭೂ ತಾಯಿಯ ಸೇವೆ ಮಾಡುವ ಪುಣ್ಯದ ಕೆಲಸ. ಕೃಷಿ ಮಾಡುವವರ ತನು, ಮನ, ಭಾವ ಶುದ್ಧಿಯಾಗಿರುತ್ತದೆ ಎಂದು ಬಳಗಾನೂರು ಮಠದ ಶ್ರೀ ಸಿದ್ಧಬಸವೇಶ್ವರ ಶಿವಾಚಾರ್ಯರು ಹೇಳಿದರು.
ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ನಗರದ ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಆಯೋಜಿಸಿದ್ದ ರೈತರಿಂದ ರೈತರಿಗೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕೃಷಿಯೇ ಸಕಲ ಕಾರ್ಯಗಳಿಗೆ ಮೂಲವಾಗಿದ್ದು, ಅನ್ನದಾತ ಜಗತ್ತಿಗೆ ಮೊದಲ ಕೆಲಸ ನೀಡಿದ ಮಾಲೀಕ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು. ಅಕ್ಷರ ಕಲಿತವರು ಮಾಡುವ ಕೋಟಿ ಉದ್ಯೋಗಕ್ಕಿಂತ ಕೃಷಿ ವಿದ್ಯೆ ಮೇಲು. ರೈತ ತಾನೊಬ್ಬನೇ ಬದುಕದೆ ಭೂಮಿ ಮೇಲಿನ ಸಕಲ ಜೀವರಾಶಿಗೂ ಅನ್ನಹಾಕುತ್ತಾನೆ ಎಂದರು.
ಕಲುಷಿತ ವಾತಾವರಣ, ಹವಾಮಾನ ವೈಪರೀತ್ಯ, ಅವೈಜ್ಞಾನಿಕ ನೀತಿಗಳಿಂದ ರೈತ ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ ಸಂಗತಿ. ಪ್ರಕೃತಿಯಲ್ಲಿ ಪುಣ್ಯದ ಭೂಮಿ ಭಾರತ. ಜಗತ್ತಿಗೆ ಜ್ಞಾನ, ಸಂಸ್ಕೃತಿ, ಆಚಾರ, ವಿಚಾರ ನೀಡುವ ಜತೆಗೆ ಸಾವಯವ ಕೃಷಿ ಕಲಿಸಿದ್ದು ಭಾರತ. ಆದರೆ, ಇಂದು ಕೃಷಿ, ಮಣ್ಣನ್ನು ಕುಲಗೆಡಿಸುವ ಕೆಲಸ ನಡೆಯುತ್ತಿದೆ.
ಅತಿಯಾದ ಕ್ರಿಮಿನಾಶಕ ಎಣ್ಣೆ, ಗೊಬ್ಬರ ಸೇರ್ಪಡೆ ಮಾಡಿ ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದ್ದೇವೆ. ಮಣ್ಣು, ಕೃಷಿ ಹಾಳಾದರೆ ರೈತರಷ್ಟೇ ಅಲ್ಲ ಎಲ್ಲರ ಆರೋಗ್ಯವೂ ದುಃಸ್ಥಿತಿಗೆ ತಲುಪಲಿದೆ. ಈ ಸತ್ಯವನ್ನು ಎಲ್ಲರೂ ಅರಿಯಬೇಕು. ದೇಶದಲ್ಲಿ ರೈತ ಹಾಗೂ ಋಷಿ ಸಂಸ್ಕೃತಿ ಉಳಿಸುವ ಕಾರ್ಯ ಆಗಬೇಕಿದೆ. ರೈತ ಉಳಿದರೆ ಬದುಕು, ಋಷಿ ಸಂಸ್ಕೃತಿ ಉಳಿದರೆ ಬದುಕಿನ ಮೌಲ್ಯ ಉಳಿಯುತ್ತದೆ ಎಂದು ತಿಳಿಸಿದರು.
ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ಎಸ್.ಡಿ.ಗೌಡಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಕೃಷಿ ವಿಸ್ತರಣಾ ನಿರ್ದೇಶಕ ಎ.ಆರ್.ಕುರುಬರ್, ಸಂಶೋಧನಾ ನಿರ್ದೇಶಕ ಅಮರೇಗೌಡ, ವಿಜ್ಞಾನಿಗಳಾದ ಡಾ.ಎಸ್.ಜಹಗೀರದಾರ್, ಡಾ.ಎ.ಸತೀಶ್‌ಕುಮಾರ್, ಡಾ.ಹನುಮೇಶ ನಾಯಕ, ಡಾ.ಎ.ಜಿ.ಶ್ರೀನಿವಾಸ್, ಬಿ.ಮಲ್ಲಿಕಾರ್ಜುನ, ಮಲ್ಲೇಶ ಕುಲುಮಿ, ಕೆ.ನಾರಾಯಣರಾವ್ ಇತರರಿದ್ದರು.
ನಾಡಗೀತೆ ವೇಳೆ ವಿದ್ಯುತ್ ಕಡಿತ
ಕಾರ್ಯಕ್ರಮ ಆರಂಭಕ್ಕೂ ಮುನ್ನ ನಾಡಗೀತೆ, ರೈತಗೀತೆ ಹಾಕಿದ ಸಂದರ್ಭದಲ್ಲಿ ಮುಜುಗರ ಉಂಟಾಯಿತು. ವಿದ್ಯುತ್ ಕಡಿತವಾಗಿದ್ದರಿಂದ ಅಬರೆಬರೆಯಾಯಿತು. ಜನರೇಟರ್ ವ್ಯವಸ್ಥೆ ಸರಿಯಾಗಿ ಮಾಡದ ಕಾರಣ ಗೀತೆಗಾಗಿ ಗಣ್ಯರು, ಪ್ರೇಕ್ಷಕರು ಕಾಯುವಂತಾಯಿತು. ಗೀತೆಗೆ ಗಾಯಕರನ್ನು ಕರೆಸದೆ ಕ್ಯಾಸೆಟ್ ಹಾಕಿದ್ದರಿಂದ ಸಮಸ್ಯೆಯಾಯಿತು. 10 ನಿಮಿಷದ ನಂತರ ಮತ್ತೆ ನಾಡಗೀತೆ, ರೈತಗೀತೆ ಹಾಕಿ ಕಾರ್ಯಕ್ರಮ ಮುಂದುವರಿಸಲಾಯಿತು. ಜನರೇಟರ್ ವ್ಯವಸ್ಥೆ, ಗಾಯಕರನ್ನು ಕರೆಸದಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸಿದರು.